ಅಮರಾವತಿ (ಆಂಧ್ರ ಪ್ರದೇಶ):ಸಾಮಾನ್ಯವಾಗಿ ಸರ್ಕಾರದ ಸಮೀಕ್ಷೆಗಳು ಎಂದರೆ ಮನೆಯಲ್ಲಿ ಇರುವವರ ವಿವರ ಅಥವಾ ಸರ್ಕಾರದಿಂದ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಿರುವವರ ಮಾಹಿತಿ ಸಂಗ್ರಹಿಸುವ ಅತ್ಯಂತ ಸಹಜ ಪ್ರಕ್ರಿಯೆಗಳು. ಆದರೆ, ಆಂಧ್ರ ಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕೆಲವು ಪ್ರಶ್ನೆಗಳು ವಿಚಿತ್ರವಾಗಿವೆ. ಅಂತಹ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ.
ಹೌದು, ಆಂಧ್ರ ಪ್ರದೇಶದಲ್ಲಿ ಗ್ರಾಮ ಮತ್ತು ವಾರ್ಡ್‌ಗಳ ಸಚಿವಾಲಯದ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಬಳಸಿಕೊಂಡು ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಎಲ್ಲೆ ಮೀರುವಂತಿವೆ. ನಿಮ್ಮ ಮನೆಯಲ್ಲಿ ವಿವಾಹೇತರ ಸಂಬಂಧಗಳಿವೆಯೇ?, ಬಹು ಲೈಂಗಿಕ ಸಂಬಂಧಗಳನ್ನು ಹೊಂದಿರುವಿರಾ?, ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗಿದ್ದೀರಾ?, ಇದಕ್ಕೆ ಸಂಬಂಧಿಸಿದ ಹಳೆ ಪ್ರಕರಣಗಳೇನಾದರೂ ಇವೆಯೇ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.
ಮುಜುಗರಕ್ಕೀಡಾಗುವ ಮಹಿಳಾ ಪೊಲೀಸರು: 'ಅಪರಾಧಕ್ಕೆ ಕಾರಣವಾಗಬಹುದಾದ ಹಳೆ ದ್ವೇಷದ ವಿವರಗಳನ್ನು ಸಂಗ್ರಹಿಸುವ' ಹೆಸರಿನಲ್ಲಿ ಆಂಧ್ರ ಪ್ರದೇಶದ ಪೊಲೀಸ್ ಇಲಾಖೆಯು ಮನೆ, ಮನೆಗೆ ತೆರಳಿ ಇಂತಹ ಮುಜುಗರದ ಪ್ರಶ್ನೆಗಳನ್ನು ಕೇಳುತ್ತಿದೆ. ಮಹಿಳಾ ಪೊಲೀಸರು ಸ್ವಯಂಸೇವಕರೊಂದಿಗೆ ತಮ್ಮ ವ್ಯಾಪ್ತಿಯ ಎಲ್ಲ ಮನೆಗಳಿಗೆ ತೆರಳಿ ಈ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಜನರಿಗೆ ಇಂತಹ ಪ್ರಶ್ನೆಗಳನ್ನು ಕೇಳಲು ಸ್ವತಃ ಮಹಿಳಾ ಪೊಲೀಸರೇ ತೊಂದರೆ ಅನುಭವಿಸಿದರೆ, ಅನಿವಾರ್ಯವಾಗಿ ಪ್ರಸ್ತಾಪಿಸಿದಾಗ, ಕೆಲವೊಮ್ಮೆ ಆಯಾ ಮನೆಗಳ ಜನರಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ.