ನವ ದೆಹಲಿ:ತುರ್ತು ವಿಚಾರಣೆ ನಡೆಸುವ ಪಟ್ಟಿಗೆ ಪ್ರಕರಣವನ್ನು ಸೇರಿಸಬೇಕೆಂದು ಪದೇ ಪದೆ ಹೇಳಕೂಡದು ಎಂದು ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ವಾದಿಸುತ್ತಿರುವ ವಕೀಲರಿಗೆ ಸುಪ್ರೀಂ ಕೋರ್ಟ್ ಇಂದು ಸೂಚಿಸಿದೆ. ಈ ರೀತಿ ಕೇಳುತ್ತಾ ಕಿರಿಕಿರಿ ಉಂಟು ಮಾಡದಿರಿ ಎಂದು ಕೋರ್ಟ್ ಮನವಿ ಮಾಡಿತು.
2002ರ ಗುಜರಾತ್ ಹಿಂಸಾಚಾರದ ಸಂದರ್ಭದಲ್ಲಿ ತನ್ನ ಕುಟುಂಬದ ಸದಸ್ಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 11 ಅಪರಾಧಿಗಳ ಬಿಡುಗಡೆಯ ವಿರುದ್ಧ ಬಾನೊ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಿಲ್ಕಿಸ್ ಬಾನೊ ಪರ ವಕೀಲೆ ಶೋಭಾ ಗುಪ್ತಾ ಅವರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯನ್ನು ಮಂಗಳವಾರ ಪಟ್ಟಿ ಮಾಡಲಾಗಿದ್ದರೂ ಅದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿಲ್ಲ.
ಮಂಗಳವಾರ, ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಪೀಠದಲ್ಲಿದ್ದ ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ, ಈ ಪ್ರಕರಣದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಪ್ರಕರಣ ಮತ್ತೊಂದು ಪೀಠದಲ್ಲಿ ವಿಚಾರಣೆಯಾಗಲಿದೆ. ಎಲ್ಲ ಅಪರಾಧಿಗಳ ಅವಧಿಪೂರ್ವ ಬಿಡುಗಡೆಯು ಅರ್ಜಿದಾರರು, ಅವರ ಬೆಳೆದ ಹೆಣ್ಣುಮಕ್ಕಳು, ಅವರ ಕುಟುಂಬ ಮಾತ್ರವಲ್ಲದೆ ಸಮಾಜ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಘಾತವನ್ನುಂಟು ಮಾಡಿದೆ. ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಸರ್ಕಾರದ ಕ್ರಮವು ಸಮಾಜದಲ್ಲಿ ಕೋಪ, ನಿರಾಶೆ, ಅಪನಂಬಿಕೆ ಮತ್ತು ಪ್ರತಿಭಟನೆಯನ್ನು ಹುಟ್ಟು ಹಾಕಿದೆ ಎಂದು ವಕೀಲೆ ಶೋಭಾ ಗುಪ್ತಾ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಬಿಲ್ಕಿಸ್ ಬಾನು ಪ್ರಕರಣ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ 'ಸುಪ್ರೀಂ' ನ್ಯಾಯಮೂರ್ತಿ