ಚೆನ್ನೈ:ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಐಎಡಿಎಂಕೆ ಹಾಗೂ ಡಿಎಂಕೆ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಮತದಾರರ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದೀಗ ಸ್ಟಾಲಿನ್ ನೇತೃತ್ವದ ಡಿಎಂಕೆ ಚುನಾವಣಾ ಪ್ರಣಾಳಿಕೆ ರಿಲೀಸ್ ಮಾಡಿ, ಭರ್ಜರಿ ಭರವಸೆ ನೀಡಿದೆ.
ಪ್ರಣಾಳಿಕೆಯಲ್ಲಿ ಭರ್ಜರಿ ಭರವಸೆ ಘೋಷಣೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಡಾಟಾ ಕಾರ್ಡ್ ಸೇರಿ ಕಂಪ್ಯೂಟರ್ ಟ್ಯಾಬ್ಲೆಟ್, ಮಹಿಳೆಯರಿಗೆ ಉಚಿತ ಸ್ಥಳೀಯ ಸಾರ್ವಜನಿಕ ಸಾರಿಗೆ, ತಮಿಳು ಮೂಲಕ ಜನರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿ, ಇಂಧನ ಬೆಲೆ ಕಡಿತ ಮತ್ತು ಪ್ರಮುಖ ಹಿಂದೂ ದೇವಾಲಯಗಳಿಗೆ ತೀರ್ಥಯಾತ್ರೆ ಹೋಗಲು ಒಂದು ಲಕ್ಷ ಜನರಿಗೆ 25 ಸಾವಿರ ರೂ ಆರ್ಥಿಕ ನೆರವು ಸೇರಿದಂತೆ 500 ಭರವಸೆ ನೀಡಿ ಪ್ರಣಾಳಿಕೆ ರಿಲೀಸ್ ಮಾಡಿದೆ.
ಇದನ್ನೂ ಓದಿ: ಲಂಡನ್, ದುಬೈನಲ್ಲೂ ಅಯೋಧ್ಯಾ ಮಾದರಿ ದೇಗುಲ: ಇಂದು ನಮೋ ಬಯಕೆ ಎಂದ ಯುಪಿ ಬಿಜೆಪಿ ಮುಖ್ಯಸ್ಥ
ಆಡಳಿತರೂಢ ಎಐಎಡಿಎಂಕೆ ಪಕ್ಷದ ವಿರುದ್ಧ ಹೋರಾಟ ಮಾಡಲು ಸಜ್ಜುಗೊಂಡಿರುವ ಡಿಎಂಕೆ ಅನೇಕ ಭರವಸೆ ನೀಡಿದ್ದು, ಪಕ್ಷದ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಇಂದು ಮಧ್ಯಾಹ್ನ ಪ್ರಣಾಳಿಕೆ ರಿಲೀಸ್ ಮಾಡಿದ್ದಾರೆ. 234 ಕ್ಷೇತ್ರಗಳ ಪೈಕಿ ಡಿಎಂಕೆ 180 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, 25 ಸ್ಥಾನ ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದೆ. ಪ್ರಮುಖವಾಗಿ ಜನಸಾಮಾನ್ಯರಿಗೆ ಹೊರೆಯಾಗಿರುವ ಪಟ್ರೋಲ್-ಡಿಸೇಲ್ ಮೇಲೆ ಕ್ರಮವಾಗಿ 5 ಹಾಗೂ 4 ರೂ ಕಡಿಮೆ ಮಾಡುವುದಾಗಿ ತಿಳಿಸಿದ್ದು, ಸಿಲಿಂಡರ್ ಮೇಲೆ 100 ರೂ ಕಡಿತಗೊಳಿಸಲಾಗುವುದು ಎಂದು ತಿಳಿಸಿದೆ.
ಮಹಿಳೆಯರಿಗೆ ಸರ್ಕಾರಿ ನೌಕರಿಯಲ್ಲಿ ಶೇ.30ರಿಂದ 40ಕ್ಕೆ ಏರಿಕೆ ಮಾಡಲಾಗುವುದು ಎಂದಿದ್ದು, 20 ಲಕ್ಷ ನಿರುದ್ಯೋಗಿ ಪದವೀಧರರಿಗೆ ತರಬೇತಿ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಿದೆ. ತಮಿಳುನಾಡಿನ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಈ ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಡಿಎಂಕೆ- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆ ಎದುರಿಸುತ್ತಿವೆ.