ಚೆನ್ನೈ(ತಮಿಳುನಾಡು):ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಜನಪರ ಆಡಳಿತಕ್ಕೆ ತಮಿಳುನಾಡಿನಲ್ಲಿ ಯಶಸ್ಸು ಸಿಕ್ಕಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು 12,800ಕ್ಕೂ ಅಧಿಕ ಸ್ಥಾನಗಳಲ್ಲಿ ಗೆದ್ದು 21 ಮಹಾನಗರ ಪಾಲಿಕೆಗಳ ಅಧಿಕಾರದ ಚುಕ್ಕಾಣಿ ಹಿಡಿದಿವೆ.
ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಸೇರಿದಂತೆ ಎಲ್ಲಾ 21 ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಡಿಎಂಕೆ ಬಹುಮತ ಸಂಪಾದಿಸಿದೆ. ಇದಲ್ಲದೇ, 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿ ಗಮನಾರ್ಹ ಸಾಧನೆ ಮಾಡಿದೆ.
ಮಾಜಿ ಮುಖ್ಯಮಂತ್ರಿಗಳಾದ ಕೆ.ಪಳನಿಸ್ವಾಮಿ (ಎಡಪ್ಪಾಡಿ, ಸೇಲಂ ಜಿಲ್ಲೆ) ಮತ್ತು ಓ.ಪನ್ನೀರಸೆಲ್ವಂ (ಪೆರಿಯಕುಲಂ, ತೇನಿ ಜಿಲ್ಲೆ) ಸೇರಿದಂತೆ ಎಐಎಡಿಎಂಕೆ ನಾಯಕರ ಕ್ಷೇತ್ರಗಳಲ್ಲಿ 946 ಪಾಲಿಕೆ ಸ್ಥಾನ, 2,360 ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ 4,388 ವಾರ್ಡ್‌ಗಳಲ್ಲಿ ಆಡಳಿತ ಪಕ್ಷ ಡಿಎಂಕೆ ಗೆದ್ದಿದೆ. ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ 2,000 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನ ಪಡೆದುಕೊಂಡಿದೆ.
ಕಮಾಲ್ ಮಾಡದ ಕಮಲ್:ಬಹುಭಾಷಾ ನಟ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮೈಯ್ಯಂ ಪಕ್ಷ ಮಹಾನಗರ ಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಲ್ಲಿ ಒಂದೂ ಸ್ಥಾನದಲ್ಲಿ ಗೆಲುವು ಸಾಧಿಸದೇ ಭಾರೀ ಹಿನ್ನಡೆ ಅನುಭವಿಸಿದೆ.