ಚೆನ್ನೈ: ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರ ಬಗ್ಗೆ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ತಿಂಗಳ ಹಿಂದೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೊ ಕ್ಲಿಪ್ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಇದು ಬಿಜೆಪಿ ಮತ್ತು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಈ ವರ್ಷದ ಮಾರ್ಚ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾದ ವೀಡಿಯೊ ಕ್ಲಿಪ್ ಇದು. ತಮ್ಮ ಪಕ್ಷವು ಮೊದಲಿನಿಂದಲೂ ಜನತೆ ತಮಿಳು ಮತ್ತು ಇಂಗ್ಲಿಷ್ ಭಾಷೆಗಳ ಅಧ್ಯಯನ ಮಾಡಲು ಉತ್ತೇಜನ ನೀಡಿದೆ ಎಂದು ಹೇಳಿದ ಅವರು, ಇದಕ್ಕಾಗಿ ಸುಂದರ್ ಪಿಚೈ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ. ತಮಿಳುನಾಡು ಮೂಲದ ಪಿಚೈ ಈಗ ಗೂಗಲ್ನ ಮುಖ್ಯಸ್ಥರಾಗಿದ್ದಾರೆ ಮತ್ತು ಒಂದು ವೇಳೆ ಪಿಚೈ ಹಿಂದಿ ಕಲಿತಿದ್ದರೆ ಅವರು ಯಾವುದೋ ಕಟ್ಟಡ ನಿರ್ಮಾಣ ಕಾಮಗಾರಿಯ ಕಾರ್ಮಿಕರಾಗಿರುತ್ತಿದ್ದರು ಎಂದು ದಯಾನಿಧಿ ಹೇಳಿದ್ದಾರೆ.
ತಮಿಳುನಾಡಿನ ಮಕ್ಕಳು ಶಿಕ್ಷಣ ಪಡೆದು ಇಂಗ್ಲಿಷ್ ಚೆನ್ನಾಗಿ ಕಲಿಯುವುದರಿಂದ, ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಪಡೆಯುತ್ತಾರೆ ಮತ್ತು ಉತ್ತಮ ಸಂಬಳ ಗಳಿಸುತ್ತಾರೆ ಎಂದು ದಯಾನಿಧಿ ತಿಳಿಸಿದ್ದಾರೆ. "ಹಿಂದಿ ಮಾತ್ರ ಕಲಿತ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಜನ ತಮಿಳು ಕಲಿತ ನಂತರ ತಮಿಳುನಾಡಿನಲ್ಲಿ ಮನೆ ಕಟ್ಟುವ ಕೆಲಸ ಮಾಡುತ್ತಾರೆ, ರಸ್ತೆ ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ. ಹಿಂದಿ ಕಲಿತರೆ ಇದೇ ಪರಿಸ್ಥಿತಿ ಬರುವುದು" ಎಂದು ವೀಡಿಯೊ ಕ್ಲಿಪ್ನಲ್ಲಿ ದಯಾನಿಧಿ ಹೇಳುತ್ತಾರೆ.
ಮಾರನ್ ಅವರ ಹೇಳಿಕೆಯನ್ನು ತೋರಿಸುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಡಿಎಂಕೆ ಸಂಸದರ ಹೇಳಿಕೆ ತುಂಬಾ ಆಕ್ಷೇಪಾರ್ಹ ಮತ್ತು ಹಿಂದಿ ಮಾತನಾಡುವ ಜನರ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಹೊಂದಿದೆ ಎಂದು ಬಿಜೆಪಿ ಹೇಳಿದೆ. ಈ ವಿಷಯ ಈಗ ಮತ್ತೆ ಏಕೆ ಮುನ್ನೆಲೆಗೆ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ.
ಇಂಥ ಹೇಳಿಕೆ ನೀಡುವುದು ಡಿಎಂಕೆಯ ಅಭ್ಯಾಸವಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಎಕ್ಸ್ನಲ್ಲಿ ಆರೋಪಿಸಿದ್ದಾರೆ. "ಅನೇಕ ನಾಯಕರು ಒಬ್ಬರ ನಂತರ ಒಬ್ಬರು ಇಂಥ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಈ ಹಿಂದೆ ಅವರು ಸನಾತನ ಧರ್ಮದ ವಿರುದ್ಧ ಮಾತನಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷ ಮತ್ತು ಐಎನ್ಡಿಐಎ ಮೈತ್ರಿಕೂಟದ ಇತರ ಪಕ್ಷಗಳು ಕೂಡ ಅವರೊಂದಿಗೆ ಒಟ್ಟಾಗಿರುವುದರಿಂದ ಅವು ಏನೂ ಮಾತನಾಡುತ್ತಿಲ್ಲ" ಎಂದು ಪೂನಾವಾಲಾ ಹೇಳಿದ್ದಾರೆ.
ಇದು ಹಳೆಯ ಹೇಳಿಕೆಯಾಗಿದ್ದರೂ, ಉತ್ತರ ಭಾರತೀಯರ ವಿರುದ್ಧ ನಿಂದನಾತ್ಮಕ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸುವ ಡಿಎಂಕೆ ನಾಯಕರ ನಿಜವಾದ ಬಣ್ಣವನ್ನು ಇದು ತೋರಿಸುತ್ತದೆ ಎಂದು ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ನಾರಾಯಣನನ್ ತಿರುಪತಿ ಹೇಳಿದ್ದಾರೆ. "ಇದು ಆಶ್ಚರ್ಯದ ವಿಷಯವಲ್ಲ. ಇದು ಹಿಂದೆಯೂ ನಡೆದಿದೆ ಮತ್ತು ಈಗಲೂ ನಡೆಯುತ್ತಿದೆ. ಭವಿಷ್ಯದಲ್ಲಿಯೂ ಡಿಎಂಕೆ ಇದನ್ನು ಮುಂದುವರಿಸುತ್ತದೆ" ಎಂದು ಅವರು ಹೇಳಿದರು.
ಬಿಜೆಪಿ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಸುಳ್ಳು ಹರಡುತ್ತಿದ್ದಾರೆ ಎಂದು ಡಿಎಂಕೆ ವಕ್ತಾರ ಜೆ. ರವೀಂದ್ರನ್ ಖಂಡಿಸಿದ್ದಾರೆ. "ಸಮಾನತೆಯ ಸಮಾಜಕ್ಕೆ ಡಿಎಂಕೆ ಸಂಪೂರ್ಣವಾಗಿ ಬದ್ಧವಾಗಿದೆ. ತಮಿಳುನಾಡು ಸೇರಿದಂತೆ ಯಾವುದೇ ಒಂದೇ ರಾಜ್ಯ ಶ್ರೇಷ್ಠವಲ್ಲ. ಉತ್ತರ ಪ್ರದೇಶ ಅಥವಾ ಬಿಹಾರದಂತಹ ಬೇರೆ ಯಾವುದೇ ರಾಜ್ಯವು ಕೀಳಲ್ಲ. ದಯಾನಿಧಿ ಮಾರನ್ ಎಂದಿಗೂ ಹೇಳದ ಅಥವಾ ಅರ್ಥೈಸದ ವಿಚಾರಗಳನ್ನು ಎತ್ತಿರುವ ಬಿಜೆಪಿಯ ದುರುದ್ದೇಶ ಸ್ಪಷ್ಟವಾಗಿ ಗೊತ್ತಾಗುತ್ತದೆ" ಎಂದು ಅವರು ಹೇಳಿದರು.
ಯಾವುದೇ ಒಬ್ಬ ವ್ಯಕ್ತಿಯು ತನ್ನ ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಅನ್ನು ಕೂಡ ಚೆನ್ನಾಗಿ ಕಲಿತಾಗ ಆತನಿಗೆ ಜೀನದಲ್ಲಿ ಸಿಗುವ ಉತ್ತಮ ಅವಕಾಶಗಳ ಬಗ್ಗೆ ಹೇಳುವುದು ಮಾತ್ರ ದಯಾನಿಧಿ ಮಾರನ್ ಅವರ ಮಾತಿನ ಸಾರಾಂಶವಾಗಿದೆ ಎಂದು ರವೀಂದ್ರನ್ ತಿಳಿಸಿದ್ದಾರೆ. ಇಂಗ್ಲಿಷ್ ಭಾಷಾ ಹಿನ್ನೆಲೆಯ ವ್ಯಕ್ತಿಗೆ ತೆರೆಯುವ ವೃತ್ತಿ ಅವಕಾಶಗಳು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಲ್ಲಿಯೂ ಹೆಚ್ಚಾಗಿರುತ್ತವೆ ಮತ್ತು ತಿಂಗಳುಗಳ ಹಿಂದೆ ಮಾರನ್ ಅವರ ಹೇಳಿಕೆಯ ತಿರುಳು ಕೂಡ ಇದೇ ಆಗಿದೆ ಎಂದು ರವೀಂದ್ರನ್ ಹೇಳಿದರು.
ಇದನ್ನೂ ಓದಿ : ಸಾಮಾಜಿಕ ಮಾಧ್ಯಮ ತ್ಯಜಿಸಲಿದ್ದಾರೆ ಶೇ 50ಕ್ಕೂ ಹೆಚ್ಚು ಜನ; ಅಧ್ಯಯನ ವರದಿ