ಚೆನ್ನೈ (ತಮಿಳುನಾಡು):ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಅಧಿನಾಯಕಿಯಾಗಿದ್ದ ಜಯಲಲಿತಾ ನಿಧನದ ಕುರಿತಂತೆ ತಮಿಳುನಾಡು ಆಡಳಿತಾರೂಢ ಡಿಎಂಕೆ ಪಕ್ಷದ ಶಾಸಕ ಮಾರ್ಕಂಡೇಯನ್ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ. ಜಯಲಲಿತಾ ಅವರದ್ದು ಸಾವಲ್ಲ, ಅದೊಂದು ಹತ್ಯೆ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.
ಇತ್ತೀಚೆಗೆ ತೂತುಕುಡಿಯ ವಿಲತ್ತಿಕುಲಂನಲ್ಲಿ ಪ್ರೊ.ಅನ್ಬಳಗನ್ ಶತಮಾನೋತ್ಸವದ ನಿಮಿತ್ತ ಡಿಎಂಕೆ ವತಿಯಿಂದ ಬೃಹತ್ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ವಿಲತ್ತಿಕುಲಂ ಕ್ಷೇತ್ರದ ಡಿಎಂಕೆ ಶಾಸಕರಾದ ಮಾರ್ಕಂಡೇಯನ್ ಮತ್ತು ಪಕ್ಷದ ಪದಾಧಿಕಾರಿಗಳು, ಸ್ವಯಂಸೇವಕರು ಮತ್ತು ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು. ಈ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಮಾರ್ಕಂಡೇಯನ್, ಜಯಲಲಿತಾ ಅವರ ನಿಧನ ಕುರಿತು ಉಲ್ಲೇಖಿಸಿದ್ದಾರೆ. ಪ್ರಧಾನಿ ಮೋದಿ ಅವರು ಜಯಲಲಿತಾ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ.
ಜಯಲಲಿತಾ ಬಗ್ಗೆ ಶಾಸಕ ಹೇಳಿದ್ದೇನು?: ಎಐಎಡಿಎಂಕೆ ಮಾಜಿ ಕಾರ್ಯನಿರ್ವಾಹಕರಾದ ಮಾರ್ಕಂಡೇಯನ್ ಹಾಲಿ ಡಿಎಂಕೆ ಶಾಸಕರಾಗಿದ್ದಾರೆ. ವಿಲತ್ತಿಕುಲಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಮಾಜಿ ಸಿಎಂ ಜಯಲಲಿತಾ ಜೀವಂತವಾಗಿರುವವರೆಗೂ ನಾನು ಎಐಎಡಿಎಂಕೆ ಪಕ್ಷದಲ್ಲೇ ಇದ್ದೆ. ಅವರು ನಿಧನರಾದರು. ಆದರೆ, ಅವರದ್ದು ಸಾವಲ್ಲ. ಮೋದಿ ಅವರು ಜಯಲಲಿತಾ ಅವರನ್ನು ಹತ್ಯೆ ಮಾಡಿಸಿದ್ದಾರೆ. ಏಕೆಂದರೆ, ಜಯಲಲಿತಾ ಅವರು ತಾವು ಪ್ರಧಾನಿ ಅಭ್ಯರ್ಥಿಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ಅವರನ್ನು ಬಿಜೆಪಿಯವರು ಹತ್ಯೆ ಮಾಡಿದರು. ನಾನು ಇದನ್ನು ಬಹಿರಂಗವಾಗಿಯೇ ಆರೋಪ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತ, ಈ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ:ಜಯಲಲಿತಾ ಸಾವಿನ ವಿಚಾರ.. ಶಶಿಕಲಾ ವಿರುದ್ಧ ತನಿಖೆಗೆ ಆಯೋಗದ ಶಿಫಾರಸು.. ಒಪಿಎಸ್ ಬಣಕ್ಕೆ ಹಿನ್ನಡೆ