ಚೆನ್ನೈ:ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಒತ್ತಾಯಿಸಿ ಆಡಳಿತಾರೂಢ ಡಿಎಂಕೆ ತನ್ನ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್ಪಿಎ)ದ ಜತೆ ಸೇರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದೆ.
ನವೆಂಬರ್ 2, 2022 ರಂದು ನವದೆಹಲಿಯಲ್ಲಿ ರಾಷ್ಟ್ರಪತಿಗಳ ಕಚೇರಿಗೆ ವಿವರವಾದ ಜ್ಞಾಪನಾ ಪತ್ರ ಸಲ್ಲಿಸಿದ ಆಡಳಿತಾರೂಢ ಮೈತ್ರಿಕೂಟವು ಬಾಕಿ ಇರುವ ನೀಟ್ ಮಸೂದೆ ಸೇರಿದಂತೆ ರಾಜ್ಯಪಾಲರಿಗೆ ಸಂಬಂಧಿಸಿದ ಹಲವು ಕಾರ್ಯಗಳು "ರಾಜ್ಯಪಾಲರ ಕಾರ್ಯ ವ್ಯಾಪ್ತಿಯಲ್ಲಿಲ್ಲ" ಎಂದು ಉಲ್ಲೇಖಿಸಿದೆ.
ಸಂವಿಧಾನ, ಕಾನೂನನ್ನು ಸಂರಕ್ಷಿಸಲು ಮತ್ತು ತಮಿಳುನಾಡಿನ ಜನ ಸೇವೆ ಮತ್ತು ಯೋಗಕ್ಷೇಮಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುತ್ತೇನೆ ಎಂದು ಅನುಚ್ಛೇದ 159 ರ ಅಡಿಯಲ್ಲಿ ಅವರು ತೆಗೆದುಕೊಂಡ ಪ್ರತಿಜ್ಞೆಯನ್ನು ರಾಜ್ಯಪಾಲ ಆರ್.ಎನ್.ರವಿ ಉಲ್ಲಂಘಿಸಿದ್ದಾರೆ. ರಾಜ್ಯದಲ್ಲಿ ಅವರು ಕೋಮು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಈ ಮೂಲಕ ರಾಜ್ಯದ ಶಾಂತಿ, ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರ ಸಾಂವಿಧಾನಿಕ ಹುದ್ದೆ ನಿರ್ವಹಿಸಲು ಅನರ್ಹರು ಎಂದು ಮನವಿಯಲ್ಲಿ ತಿಳಿಸಿದೆ.
ರಾಜಭವನದಲ್ಲಿ ಬಾಕಿ ಉಳಿದಿರುವ ಮಸೂದೆಗಳ ಪಟ್ಟಿಯನ್ನೂ ಸಹ ಈ ಮನವಿಯೊಂದಿಗೆ ಲಗತ್ತಿಸಿದ್ದಾರೆ. ಇದರಲ್ಲಿ ಉಪ ಕುಲಪತಿಗಳ ನೇಮಕಾತಿ ಅಧಿಕಾರವನ್ನು ಕುಲಪತಿಗಳು ಅಂದರೆ ರಾಜ್ಯಪಾಲರ ಬದಲಿಗೆ ರಾಜ್ಯ ಸರ್ಕಾರಕ್ಕೆ ನೀಡುವ ಮಸೂದೆಯೂ ಸೇರಿದೆ.
ಇದನ್ನೂ ಓದಿ:ನಾನು ಭಯೋತ್ಪಾದಕನಲ್ಲ, ಭ್ರಷ್ಟನೂ ಅಲ್ಲ, ಜನರ ಪ್ರೀತಿಪಾತ್ರನು: ಸಿಎಂ ಕೇಜ್ರಿವಾಲ್