ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಜಾರಿ ನಿರ್ದೇಶನಾಲಯದ ಕೋರ್ಟ್ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಐವರು ಹಾಜರಾದರು. ರೋಸ್ ಅವೆನ್ಯೂ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ. ವಿಶೇಷ ನ್ಯಾಯಾಧೀಶ ವಿಕಾಸ್ ಧೂಲ್ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದರು.
ಈ ವೇಳೆ ಮಾತನಾಡಿರುವ ಡಿಕೆಶಿ, ನ್ಯಾಯಾಲಯಕ್ಕೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದೆ. ಕೋರ್ಟ್ ಕೆಲ ದಾಖಲೆಗಳನ್ನು ಇಡಿ ಅಧಿಕಾರಿಗಳ ಬಳಿ ಕೇಳಿದೆ. ಅವರು ದಾಖಲೆಗಳನ್ನು ಕೊಟ್ಟ ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಕೇಸ್: ದೆಹಲಿ ಇಡಿ ವಿಶೇಷ ನ್ಯಾಯಾಲಯದಿಂದ ಡಿಕೆಶಿಗೆ ಜಾಮೀನು ವಿಸ್ತರಣೆ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿನ್ ನಾರಾಯಣ್, ಸುನೀಲ್ ಕುಮಾರ್, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್ ಅವರಿಗೆ ಕೋರ್ಟ್ ಕಳೆದ ಆಗಸ್ಟ್ 2ರಂದು ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಡಿಕೆಶಿ ಅವರಿಗೆ ದೆಹಲಿ ಹೈಕೋರ್ಟ್ ಈಗಾಗಲೇ ಜಾಮೀನು ಮಂಜೂರು ಮಾಡಿದೆ. ಇವರೂ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಇಡಿ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಮೇ 31ರಂದು ನ್ಯಾಯಾಲಯ ವಿಚಾರಣೆಗೆ ತೆಗೆದುಕೊಂಡಿತ್ತು. ಎಲ್ಲ ಆರೋಪಿಗಳ ವಿರುದ್ಧ ಮೇ 26 ರಂದು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಕೆ ಶಿವಕುಮಾರ್ 2019ರ ಸೆಪ್ಟೆಂಬರ್ 3ರಂದು ಬಂಧನಕ್ಕೊಳಗಾಗಿದ್ದರು. ಆದರೆ, ಅಕ್ಟೋಬರ್ 23ರಂದು ದೆಹಲಿ ಹೈಕೋರ್ಟ್ 25 ಲಕ್ಷ ರೂಪಾಯಿ ಶ್ಯೂರಿಟಿ ಮೇಲೆ ಜಾಮೀನು ನೀಡಿತ್ತು. ದೆಹಲಿ ಹೈಕೋರ್ಟ್‌ನಿಂದ ಡಿ ಕೆ ಶಿವಕುಮಾರ್‌ಗೆ ಜಾಮೀನು ಮಂಜೂರು ಮಾಡಿರುವುದನ್ನು ಇಡಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. 2019 ರ ನವೆಂಬರ್ 15 ರಂದು ಇಡಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿತ್ತು.