ಚೆನ್ನೈ, ತಮಿಳುನಾಡು:ಆಸ್ಟ್ರೇಲಿಯಾದಲ್ಲಿ ಓದುತ್ತಿದ್ದಾಗ ಕರ್ನಾಟಕದ ಹುಡುಗ ಮತ್ತು ತಮಿಳುನಾಡಿನ ಹುಡುಗಿ ಭೇಟಿಯಾಗಿದ್ದರು. ಬಳಿಕ ಇವರ ಮಧ್ಯೆ ಪರಿಚಯ ಬೆಳೆಯಿತು. ಇವರ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಅಕ್ಟೋಬರ್ 2006 ರಲ್ಲಿ ಚೆನ್ನೈನ ಕ್ರಿಶ್ಚಿಯನ್ ಚರ್ಚ್‌ನಲ್ಲಿ ವಿವಾಹವಾದರು. ಈ ಅಂತರ್ಧರ್ಮೀಯ ದಂಪತಿಗೆ ಮುದ್ದಾದ ಗಂಡು ಮಗುವೂ ಸಹ ಜನಿಸಿದೆ.
ಇನ್ನು ಈ ದಂಪತಿ ತಮ್ಮ ಕುಟುಂಬದೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು. ಕುಟುಂಬ ಸಮೇತ ಆಸ್ಟ್ರೇಲಿಯದಲ್ಲಿ ವಾಸವಿದ್ದ ಸಂದರ್ಭದಲ್ಲಿ ಗಂಡನ ಕುಟುಂಬಕ್ಕೆ ಪತ್ನಿಯ ಧರ್ಮ, ಸಂಸ್ಕೃತಿ, ಭಾಷೆಯ ಬಗ್ಗೆ ಸಮಸ್ಯೆ ಉಂಟಾಗಿದೆ. ಇದರಿಂದ ಮಹಿಳೆ ಮಾನಸಿಕವಾಗಿ ನೊಂದುಕೊಂಡಿದ್ದಳು ಎನ್ನಲಾಗಿದೆ. ಈ ನಡುವೆ ಪತಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದರ ಬಗ್ಗೆ ಪತ್ನಿಗೆ ತಿಳಿದಿದೆ. ಅಷ್ಟೇ ಅಲ್ಲ ಆಕೆಯ ಖರ್ಚಿಗೆಂದು ಲಕ್ಷಗಟ್ಟಲೆ ಹಣ ವಸೂಲಿ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾನೆ ಎಂಬ ಆರೋಪವೂ ಕೇಳಿ ಬಂದಿತ್ತು.
ಅಲ್ಲದೇ ತನ್ನ ತಾಯಿಯೊಂದಿಗೆ ಆಸ್ಟ್ರೇಲಿಯಾಕ್ಕೆ ಬಂದು ದೌರ್ಜನ್ಯ ಎಸಗಿದ ಪತಿ ವಿರುದ್ಧ ಪತ್ನಿ ನೀಡಿದ ದೂರಿಗೆ ಸಂಬಂಧಿಸಿದ ಪ್ರಕರಣ ಇನ್ನೂ ಬಾಕಿ ಇದೆ. ಈ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಅಡಿಲೇಡ್ ಫೆಡರಲ್ ಸರ್ಕ್ಯೂಟ್ ಕೋರ್ಟ್‌ನಲ್ಲಿ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 2020ರಲ್ಲಿ ಇಬ್ಬರಿಗೂ ವಿಚ್ಛೇದನ ನೀಡುವಂತೆ ಆದೇಶಿಸಿತ್ತು.
ಆಸ್ಟ್ರೇಲಿಯಾ ಕೋರ್ಟ್ ನೀಡಿರುವ ವಿಚ್ಛೇದನವನ್ನು ಅನೂರ್ಜಿತಗೊಳಿಸುವಂತೆ ಕೋರಿ ಪತ್ನಿ ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವು ಮದ್ರಾಸ್ ಹೈಕೋರ್ಟ್ ಸಂಕೀರ್ಣದಲ್ಲಿರುವ 3ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಕೆ.ಎಸ್.ಜಯಮಂಗಲಂ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಆ ವೇಳೆ ಪ್ರಕರಣಕ್ಕೆ ಹಾಜರಾಗುವಂತೆ ಪತಿಗೆ ಇಮೇಲ್ ಹಾಗೂ ವಾಟ್ಸ್ಆ್ಯಪ್ ಮೂಲಕ ಸಮನ್ಸ್ ಕಳುಹಿಸಿದ್ದರೂ ಅವರು ಹಾಜರಾಗಿರಲಿಲ್ಲ.