ನವದೆಹಲಿ:ಹೊಸ ತೆರಿಗೆ ಸ್ಲ್ಯಾಬ್ಗಳ ಮೂಲಕ ಸಮಾಜದ ಕೆಳವರ್ಗದ ಜನತೆಗೆ ಅಗತ್ಯ ಅನುಕೂಲ ಮಾಡಿಕೊಟ್ಟಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿರುವ ಮಧ್ಯೆ ಕಾಂಗ್ರೆಸ್ ಈ ಬಜೆಟ್ ಅನ್ನು ಟೀಕಿಸಿದೆ. ಬಜೆಟ್ನಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಮನರೇಗಾ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವ ಬಗ್ಗೆ ಪಕ್ಷ ವಾಗ್ದಾಳಿ ನಡೆಸಿದೆ. ಈ ಕುರಿತು ಮಾತನಾಡಿದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಪಿಎಂ ಕಿಸಾನ್ ಯೋಜನೆಯು ಮನರೇಗಾ ಯೋಜನೆಯ ಸೌಲಭ್ಯಗಳನ್ನು ಅತಿಕ್ರಮಿಸುತ್ತಿದೆ ಮತ್ತು ವೃದ್ಧಾಪ್ಯ ಪಿಂಚಣಿಯು ಮನರೇಗಾ ಯೋಜನೆಯನ್ನು ಅತಿಕ್ರಮಿಸುತ್ತಿದೆ. ಇಂಥ ಹತ್ತಾರು ಅತಿಕ್ರಮಣಗಳಿವೆ ಎಂದು ಆರೋಪಿಸಿದ್ದಾರೆ.
ಬಜೆಟ್ ಅನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದನ್ನು 'ಮಿತ್ರ್ ಕಾಲ್' ಬಜೆಟ್ ಎಂದು ಬಣ್ಣಿಸಿದ್ದಾರೆ. 'ಅಮೃತ್ ಕಾಲ' ಬಜೆಟ್ ಎಂದ ಸರ್ಕಾರದ ವಿರುದ್ಧ ಮಿತ್ರಕಾಲ್ ಪದ ಬಳಸಿ ರಾಹುಲ್ ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ ಮಂಡಿಸಿದ ಬಜೆಟ್ ಮಿತ್ರರಿಗಾಗಿ ಮಂಡಿಸಿದ ಬಜೆಟ್ ಎಂದು ರಾಹುಲ್ ಹೇಳಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವ ಬಜೆಟ್ ಎಂದು ಪರೋಕ್ಷವಾಗಿ ರಾಹುಲ್ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದಿರುವ ರಾಹುಲ್, ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಮಿತ್ರಕಾಲ್ ಬಜೆಟ್ಗೆ ಯಾವುದೇ ದೃಷ್ಟಿಕೋನ ಇಲ್ಲ. ಹಣದುಬ್ಬರ ನಿಭಾಯಿಸಲು ಯಾವುದೇ ಯೋಜನೆ ಇಲ್ಲ. ಅಸಮಾನತೆಯನ್ನು ತಡೆಯುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಶೇಕಡಾ 1 ರಷ್ಟು ಶ್ರೀಮಂತರು ಶೇಕಡಾ 40 ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಶೇಕಡಾ 50 ರಷ್ಟು ಬಡವರು ಶೇಕಡಾ 64 ರಷ್ಟು ಜಿಎಸ್‌ಟಿ ಪಾವತಿಸುತ್ತಾರೆ. ಶೇಕಡಾ 42 ರಷ್ಟು ಯುವಕರು ನಿರುದ್ಯೋಗಿಗಳು. ಆದರೂ ಪ್ರಧಾನಿಗೆ ಈ ಬಗ್ಗೆ ಕಾಳಜಿಯೇ ಇಲ್ಲ. ಭಾರತದ ಭವಿಷ್ಯವನ್ನು ನಿರ್ಮಿಸಲು ಸರ್ಕಾರ ಯಾವುದೇ ದೂರದೃಷ್ಟಿಯನ್ನು ಹೊಂದಿಲ್ಲ ಎಂಬುದನ್ನು ಈ ಬಜೆಟ್ ಸಾಬೀತುಪಡಿಸುತ್ತದೆ ಎಂದು ರಾಹುಲ್ ಟ್ವೀಟ್ ನಲ್ಲಿ ಬರೆದಿದ್ದಾರೆ.