ಕೃಷ್ಣಗಿರಿ(ತಮಿಳುನಾಡು): ಸಾರ್ವಜನಿಕ ನಲ್ಲಿ ಸ್ಥಳದಲ್ಲಿ ಬಟ್ಟೆ ಒಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಜಗಳ ಶುರುವಾಗಿ ಸೇನಾ ಯೋಧನ ಬಲಿಪಡೆಯುವದೊಂದಿಗೆ ಅಂತ್ಯಗೊಂಡಿದೆ. ಜಿಲ್ಲೆಯ ವೇಲಂಪಟ್ಟಿ ಸಾರ್ವಜನಿಕ ನಲ್ಲಿ ಸ್ಥಳದಲ್ಲಿ ಬಟ್ಟೆ ಒಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಯೋಧನ ಪತ್ನಿ ಹಾಗೂ ಡಿಎಂಕೆ ನಗರಸಭೆ ಸದಸ್ಯನ ನಡುವೆ ಮಾತಿನ ಚಕಮಕಿ ಬೆಳೆದು ಜಗಳ ತಾರಕ್ಕೇರಿದೆ. ಅಲ್ಲಿದ್ದವರು ರಾಜಿ ಮಾಡಿ ಕಳುಹಿಸಿದ್ದರು.
ಮತ್ತೇ ಜಗಳ ಶುರುವಾಗಿದ್ದು, ಆಕ್ರೋಶಗೊಂಡ ಡಿಎಂಕೆ ಕೌನ್ಸಿಲರ್ ಚಿನ್ನಸ್ವಾಮಿ ಹಾಗೂ ಅವರ 10ಕ್ಕೂ ಹೆಚ್ಚು ಸಂಬಂಧಿಕರು ಸೇರಿ ಸೇನಾಯೋಧನ ಮೇಲೆ ತೀವ್ರ ಹಲ್ಲೆ ನಡೆಸಿ, ಗಾಯಗೊಳಿಸಿದ್ದರು. ತಕ್ಷಣ ತೀವ್ರವಾಗಿ ಗಾಯಗೊಂಡಿದ್ದ ಸೇನಾಯೋಧನನ್ನು ಹೊಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸಿದ ಪರಿಣಾಮ ಸಾವಿಗೀಡಾಗಿದ್ದಾರೆ. ವೆಲ್ಲಂಪಟ್ಟಿ ಪಟ್ಟಣದ ನಿವಾಸಿ ಸೇನಾಯೋಧ ಪ್ರಭಾಕರನ್ ಹಲ್ಲೆಯಿಂದ ಸಾವಿಗೀಡಾದ ದುರ್ದೈವಿ. ವೇಲಂಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರು ಆರೋಪಿಗಳನ್ನು ಬಂಧಿಸಿದ ಪೊಲೀಸರು:ಸೇನಾಯೋಧನ ಕುಟುಂಬದ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ 10 ಆರೋಪಿಗಳಲ್ಲಿ ಈಗ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಡಿಎಂಕೆ ಕೌನ್ಸಿಲರ್ ಚಿನ್ನಸ್ವಾಮಿ ಸೇರಿದಂತೆ ಪುಲಿಪಾಂಡಿ ಹಾಗೂ ಕಾಳಿಯುಪ್ಪನ್ ಮೂರು ಆರೋಪಿಗಳ ಪತ್ತೆಗೆ ಸ್ಥಳೀಯ ಪೊಲೀಸರು ವಿಶೇಷ ತಂಡ ರಚಿಸಿ ಬಂಧನಕ್ಕೆ ಜಾಲ ಬೀಸಿದ್ದಾರೆ. ಕೃಷ್ಣಗಿರಿ ಜಿಲ್ಲೆಯ ಬೋಚಂಪಳ್ಳಿ ಪಕ್ಕದ ವೆಲಂಪಟ್ಟಿ ನಿವಾಸಿ ಚಿನ್ನಸ್ವಾಮಿ (50) ಅವರು ನಾಗೋಜನಹಳ್ಳಿ ಪುರಸಭೆಯ ವಾರ್ಡ್ 1ರ ಡಿಎಂಕೆ ಕೌನ್ಸಿಲರ್. ವೆಲ್ಲಂಪಟ್ಟಿ ಪಟ್ಟಣದಲ್ಲಿ ವಾಸಿಸುತ್ತಿದ್ದ ಪ್ರಭಾಕರನ್ (30) ಮತ್ತು ಅವರ ಕಿರಿಯ ಸಹೋದರ ಪ್ರಭು (29) ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.