ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಅವರ ಮಗ ಶಾಸಕ ನಿತೇಶ್ ರಾಣೆ ವಿರುದ್ಧ ಪೊಲೀಸರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಇತ್ತೀಚಿಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ, ನಾರಾಯಣ ರಾಣೆ ಮತ್ತು ಅವರ ಪುತ್ರ ನಿತೇಶ್ ರಾಣೆ ಅವರು ಸಾಲಿಯಾನ್ ಸಾವಿನ ಹಿಂದೆ ಫೌಲ್ ಪ್ಲೇ ಇದೆ ಎಂದು ಆರೋಪಿಸಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರು ಬಾಂದ್ರಾ ಮನೆಯೊಳಗೆ ಶವವಾಗಿ ಪತ್ತೆಯಾಗುವ ಕೆಲವೇ ದಿನಗಳ ಮೊದಲು, ಜೂನ್ 8, 2020 ರಂದು ದಿಶಾ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ದಿಶಾ ಅವರ ತಾಯಿ ವಸಂತಿ ಸಾಲಿಯಾನ್ ಅವರು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ (MSWC) ಮೂಲಕ ನಾರಾಯಣ ರಾಣೆ ಮತ್ತು ನಿತೇಶ್ ರಾಣೆ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. ಮಾಧ್ಯಮಗಳಲ್ಲಿ ಸಾಲಿಯಾನ್ ಕುಟುಂಬದ ಮರ್ಯಾದೆಗೆ ಧಕ್ಕೆ ತಂದ ಆರೋಪದ ಮೇಲೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.