ನವದೆಹಲಿ: ಇಂದು ಹೈದರಾಬಾದ್ನಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಪಕ್ಷದ ವರಿಷ್ಠರು ಚರ್ಚಿಸಲಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸಿಡಬ್ಲ್ಯೂಸಿಯ ಪುನಾರಚನೆಯ ಮೊದಲ ಸಭೆ ಇದಾಗಿದೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, "ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆಯುತ್ತಿರುವ ಮೊದಲ ಸಿಡಬ್ಲ್ಯೂಸಿ ಸಭೆ ಇದು. ನಾಳೆ ವಿಸ್ತೃತ ಕಾರ್ಯಕಾರಿ ಸಭೆ ನಡೆಯಲಿದ್ದು, ಅಲ್ಲಿ ಪಕ್ಷಕ್ಕೆ ಸಂಬಂಧಿಸಿದ ಚರ್ಚೆ ನಡೆಯಲಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಸೇರಿದಂತೆ ಕಾಂಗ್ರೆಸ್ ನಾಯಕರು ಮುಂಬರಲಿರುವ ಐದು ರಾಜ್ಯಗಳ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಲಿದ್ದು, ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಲಿದ್ದಾರೆ. ಮೈತ್ರಿಕೂಟ ಇಂಡಿಯಾ ಕುರಿತು ಮುಂದಿನ ಸಭೆಯಲ್ಲಿ ಮೈತ್ರಿಕೂಟದ ಪಾಲುದಾರರ ಜೊತೆಗೆ ಚರ್ಚಿಸಲಾಗುವುದು" ಎಂದು ಖರ್ಗೆ ತಿಳಿಸಿದರು.
ಹೈದರಾಬಾದ್ನಲ್ಲಿ ನಡೆಯುತ್ತಿರುವ ಸಿಡಬ್ಲ್ಯೂಡಿ ಸಭೆಯ ಅಧ್ಯಕ್ಷತೆ ವಹಿಸಲು ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬೆಳಗ್ಗೆ ಹೈದರಾಬಾದ್ಗೆ ಬಂದಿಳಿದಿದ್ದಾರೆ. ಇವರಲ್ಲದೇ ಕಾಂಗ್ರೆಸ್ನ ನಾಯಕರು ಸಭೆಯಲ್ಲಿ ಭಾಗವಹಿಸಲು ಹೈದರಾಬಾದ್ಗೆ ತೆರಳಿದ್ದಾರೆ. ಶುಕ್ರವಾರ ರಂಗಾರೆಡ್ಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪ್ರಮುಖ ಶತ್ರು ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸಲು ಮುಂದಿನ ಎರಡು ದಿನಗಳಲ್ಲಿ ಸಿಡಬ್ಲ್ಯೂಸಿ ಸಭೆ ನಡೆಸಲಿದೆ ಎಂದು ಹೇಳಿದ್ದಾರೆ.