ಡೆಹ್ರಾಡೂನ್: 1970ರ ದಶಕದಲ್ಲಿ ಉತ್ತರಾಖಂಡ್ ಬೆಟ್ಟಗಳಲ್ಲಿ ಚಿಪ್ಕೊ ಚಳವಳಿ ನಡೆದಿತ್ತು. ಭಾನುವಾರ ಚಿಪ್ಕೊ ಚಳವಳಿ ತೊಟ್ಟಿಲು ಭೀಕರ ದುರಂತಕ್ಕೆ ಸಾಕ್ಷಿಯಾಯಿತು. ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿತು. ಹಲವರು ಕಾಣೆಯಾದರು. ಜನರಲ್ಲಿ ಭೀತಿಯನ್ನು ಹುಟ್ಟುಹಾಕಿತು.
ಸಾವಿರಾರು ಜನರನ್ನು ಕೊಂದ 2013 ಕೇದಾರನಾಥ ಪ್ರವಾಹದ ಭಯಾನಕ ನೆನಪುಗಳನ್ನು ಈ ದೃಶ್ಯಗಳು ಜನರಿಗೆ ಮರಳಿ ತಂದವು. ಜೋಶಿಮಠ್ ಗ್ರಾಮದಿಂದ 26 ಕಿ.ಮೀ ದೂರದಲ್ಲಿದೆ ಚಿಪ್ಕೊ ಅಥವಾ ಪ್ರಸಿದ್ಧ ಮರ - ಅಪ್ಪುಗೆಯ ಆಂದೋಲನ ನಡೆದ ರೈನಿ ಗ್ರಾಮ. ಇಲ್ಲಿ ಸುಮಾರು 48 ವರ್ಷಗಳ ಹಿಂದೆ ಚಿಪ್ಕೊ ಚಳವಳಿ ಪ್ರಾರಂಭವಾಯಿತು ಮತ್ತು ಜನಸಾಮಾನ್ಯರ ಬೆಂಬಲವನ್ನು ಗಳಿಸಿತು. ಅರಣ್ಯವನ್ನು ಕತ್ತರಿಸದಂತೆ ರಕ್ಷಿಸುವ ಸಂಕೇತವಾಗಿ ಜನರು ಮರಗಳನ್ನು ಅಪ್ಪಿಕೊಂಡು ಈ ಚಳವಳಿ ನಡೆಸಿದರು.
ಚಿಪ್ಕೊ ಚಳವಳಿಯ ನಾಯಕಿ ಗೌರಾ ದೇವಿ ಅವರು ರೈನಿ ಗ್ರಾಮದವರಾಗಿದ್ದು, ಮರಗಳನ್ನು ಕಡಿಯುವ ಬದಲು ತನ್ನ ಮೇಲೆ ಗುಂಡು ಹಾರಿಸಬೇಕೆಂದು ಸವಾಲು ಹಾಕಿದ್ದರು. ಪರಿಸರ ಪ್ರಜ್ಞೆಯ ಗ್ರಾಮಸ್ಥರು ಋಷಿ ಗಂಗಾ ಹೈಡಲ್ ಯೋಜನೆಯ ನಿರ್ಮಾಣವು ಅವರಿಗೆ ದೊಡ್ಡ ಹಾನಿಯನ್ನುಂಟುಮಾಡಬಹುದು ಎಂಬ ಎಚ್ಚರಿಕೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಇತ್ತ ಯಾರೊಬ್ಬರು ಗಮನ ನೀಡಲಿಲ್ಲ. ಆ ಜನರ ಭೀತಿ ನಿನ್ನೆ ನಿಜವಾಯಿತು. ನೋಡ ನೋಡುತ್ತಿದ್ದಂತೆ ದೈತ್ಯಾಕಾರವಾಗಿ ಬಂದ ನದಿಯ ನೀರು ಕಣ್ಮುಚ್ಚಿ ತೆರೆಯುವುದರಲ್ಲಿ ಅನೇಕ ಜನರನ್ನು ಬಲಿ ಪಡೆಯಿತು. ಅದೆಷ್ಟೋ ಜನ ಭಗ್ನಾವಶೇಷಗಳಲ್ಲಿ ಸಿಲುಕಿದ್ದು, ಎರಡನೇ ದಿನವಾದ ಇಂದು ಸಹ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.