ನವದೆಹಲಿ: ಮೋದಿ ಸರ್ಕಾರ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತು ದಿಗ್ವಿಜಯ ಸಿಂಗ್ ಅವರ ವೈಯಕ್ತಿಕ ಹೇಳಿಕೆಯನ್ನು ತಾವು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ. ಆದರೆ, ಹಾಗಂತ ದಿಗ್ವಿಜಯ್ ಹೇಳಿಕೆಯನ್ನು ರಾಹುಲ್ ಖಂಡಿಸಲಿಲ್ಲ. ಸರ್ಜಿಕಲ್ ಸ್ಟ್ರೈಕ್‌ಗಳ ಕುರಿತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಯು ಭಾರಿ ವಿವಾದ ಸೃಷ್ಟಿಸಿದೆ. ಸಿಂಗ್ ಹೇಳಿಕೆಯು ರಕ್ಷಣಾ ಪಡೆಗಳ ನೈತಿಕತೆಯನ್ನು ಕುಗ್ಗಿಸುವಂಥ ಮಾತಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ದಿಗ್ವಿಜಯ್ ಅವರ ಹೇಳಿಕೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ದಿಗ್ವಿಜಯ ಸಿಂಗ್ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ನಾವು ಅದನ್ನು ಒಪ್ಪುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಕಾಂಗ್ರೆಸ್ನ ಅಧಿಕೃತ ನಿಲುವು. ಅವರು (ಸಶಸ್ತ್ರ ಪಡೆಗಳು) ಯಾವುದೇ ಪುರಾವೆ ಒದಗಿಸಬೇಕಾಗಿಲ್ಲ ಎಂದು ಹೇಳಿದರು.
ಅಂತರ ಕಾಯ್ದುಕೊಂಡ ಪಕ್ಷ:ಏತನ್ಮಧ್ಯೆ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿಕೆಯಿಂದ ಪಕ್ಷ ಅಂತರ ಕಾಯ್ದುಕೊಂಡಿದೆ. ದಿಗ್ವಿಜಯ್ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಮತ್ತು ಅದು ಪಕ್ಷದ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ. ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಅವರದೇ ಆಗಿವೆ ಮತ್ತು ಅವು ಕಾಂಗ್ರೆಸ್ ನಿಲುವನ್ನು ಪ್ರತಿಬಿಂಬಿಸುವುದಿಲ್ಲ.
ಯುಪಿಎ ಸರ್ಕಾರವು 2014 ರ ಮೊದಲೇ ಸರ್ಜಿಕಲ್ ಸ್ಟ್ರೈಕ್ಗಳನ್ನು ನಡೆಸಿತ್ತು. ರಾಷ್ಟ್ರೀಯ ಹಿತಾಸಕ್ತಿಯ ಎಲ್ಲ ಮಿಲಿಟರಿ ಕ್ರಮಗಳನ್ನು ಕಾಂಗ್ರೆಸ್ ಬೆಂಬಲಿಸಿದೆ ಮತ್ತು ಬೆಂಬಲಿಸುತ್ತದೆ ಎಂದು ಜೈರಾಮ್ ರಮೇಶ್ ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಶ್ರೀನಗರದಿಂದ ದೆಹಲಿಗೆ ತನ್ನ ಸಿಬ್ಬಂದಿಯನ್ನು ಕಳುಹಿಸುವ ಸಿಆರ್‌ಪಿಎಫ್ ಮನವಿಯನ್ನು ಸರ್ಕಾರ ಒಪ್ಪಲಿಲ್ಲ. ಇದೇ ಕಾರಣದಿಂದ 2019 ರಲ್ಲಿ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಗೆ 40 ಯೋಧರು ಪ್ರಾಣ ತ್ಯಾಗ ಮಾಡಬೇಕಾಯಿತು ಎಂದು ಸೋಮವಾರ ದಿಗ್ವಿಜಯ ಸಿಂಗ್ ಆರೋಪಿಸಿದ್ದರು.