ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತನ್ನ ಹೇಳಿಕೆ ದಾಖಲಿಸಿತು. 2023ರ ಆಗಸ್ಟ್ 12ರಿಂದ 2023ರ ಆಗಸ್ಟ್ 26ರವರೆಗೆ ಬಿಳಿಗುಂಡ್ಲುವಿಗೆ ಒಟ್ಟು 1,49,898 ಕ್ಯೂಸೆಕ್ ನೀರು ಬಿಡುವ ಮೂಲಕ ಕರ್ನಾಟಕ ತನ್ನ ನಿರ್ದೇಶನಗಳನ್ನು ಈಡೇರಿಸಿದೆ. ಅಲ್ಲದೇ, ಆಗಸ್ಟ್ 29ರ ಬೆಳಗ್ಗೆ 8ರಿಂದ ಮುಂದಿನ 15 ದಿನಗಳವರೆಗೆ 5,000 ಕ್ಯೂಸೆಕ್ ನೀರು ಬಿಡುಗಡೆಗೆ ಕರ್ನಾಟಕಕ್ಕೆ ನಿರ್ದೇಶಿಸಲಾಗಿದೆ ಎಂದು ಪ್ರಾಧಿಕಾರವು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಲಿಖಿತ ಪ್ರತಿಕ್ರಿಯೆ ದಾಖಲಿಸಿರುವ ಪ್ರಾಧಿಕಾರ, ಆಗಸ್ಟ್ 11ರಂದು ಪ್ರಾಧಿಕಾರದ 22ನೇ ಸಭೆಯಲ್ಲಿ ಕರ್ನಾಟಕಕ್ಕೆ ಬಿಳಿಗುಂಡ್ಲು ಮೂಲಕ 10,000 ಕ್ಯೂಸೆಕ್ನಂತೆ 15 ದಿನಗಳವರೆಗೆ ನೀರು ಬಿಡಲು ನಿರ್ದೇಶನ ನೀಡಲಾಗಿತ್ತು. ಆಗಸ್ಟ್ 29ರಂದು ನಡೆದ 23ನೇ ಸಭೆಯಲ್ಲಿ ಕರ್ನಾಟಕದ ಸದಸ್ಯರು ಆ.12ರಿಂದ 26ರವರೆಗೆ ಒಟ್ಟು 1,49,898 ಕ್ಯೂಸೆಕ್ ನೀರು ಬಿಡುವ ಮೂಲಕ ಪ್ರಾಧಿಕಾರದ ನಿರ್ದೇಶನವನ್ನು ಪೂರೈಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ ಎಂದು ಹೇಳಿದೆ.
ಆಗಸ್ಟ್ 11ರ ಸಭೆಯಲ್ಲಿ ಕರ್ನಾಟಕವು ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಿಂದ ಒಟ್ಟಿಗೆ ನೀರು ಬಿಡುಗಡೆ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ಬಿಳಿಗುಂಡ್ಲುವಿಗೆ 10,000 ಕ್ಯೂಸೆಕ್ ಹರಿಸುವ ಬಗ್ಗೆ ನಿರ್ಧರಿಸಲಾಗಿತ್ತು. ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ನೀಡಿರುವ ನಿರ್ದೇಶನಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಂತೆ ಹಾಗೂ ಪ್ರಸಕ್ತ ನೀರಿನ ವರ್ಷದ ಉಳಿದ ಅವಧಿಯಲ್ಲಿ ನೀರು ಬಿಡುಗಡೆ ಖಚಿತಪಡಿಸಿಕೊಳ್ಳಲು ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಅರ್ಜಿ ಸಲ್ಲಿಸಿದೆ.