ಜಮ್ಮು: 44 ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಮತ್ತೊಮ್ಮೆ ಅನುಮಾನಿಸಿದ್ದಾರೆ. ದಾಳಿ ನಿಜವಾಗಿ ನಡೆದಿದ್ದೇ ಆದಲ್ಲಿ ದೇಶಕ್ಕೆ ಕೇಂದ್ರ ಸರ್ಕಾರವು ಪುರಾವೆಯನ್ನು ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಉಗ್ರರಿಗೆ 300 ಕೆಜಿ ಆರ್‌ಡಿಎಕ್ಸ್ ಸಿಕ್ಕಿದ್ದು ಹೇಗೆ?, ಡಿಎಸ್ಪಿ ದೇವೇಂದ್ರ ಸಿಂಗ್ ಉಗ್ರರಿಂದ ತಪ್ಪಿಸಿಕೊಂಡಿರುವುದಕ್ಕೆ ಇಂದಿಗೂ ಉತ್ತರ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ವಿಡಿಯೋ ಟ್ವೀಟ್ ಮಾಡಿರುವ ದಿಗ್ವಿಜಯ ಸಿಂಗ್ ಅವರು ಈ ಎಲ್ಲಾ ಪ್ರಶ್ನೆಗಳನ್ನು ಎತ್ತುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಪ್ಪು ತಿದ್ದಿಕೊಂಡಿದ್ದೇವೆ, ಮಾತುಕತೆಗೆ ಸಿದ್ಧ ಎಂದಿರುವ ಪಾಕಿಸ್ತಾನ ಪ್ರಧಾನಿ ಹೇಳಿದ್ದಾರೆ. ಈ ವಿಷಯದಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು ಪಾಕ್ ಪಿಎಂ ನಡುವಿನ ಅಂತಾರಾಷ್ಟ್ರೀಯ ಸಂಬಂಧದ ಬಗ್ಗೆಯೂ ಬಹಿರಂಗ ಪಡಿಸುವಂತೆ ಒತ್ತಾಯಿಸಿದ್ದಾರೆ.
'ಪುಲ್ವಾಮಾ ಘಟನೆಯಲ್ಲಿ ಭಯೋತ್ಪಾದಕನಿಗೆ 300 ಕೆಜಿ ಆರ್‌ಡಿಎಕ್ಸ್ ಎಲ್ಲಿಂದ ಸಿಕ್ಕಿತ್ತು? ದೇವೇಂದ್ರ ಸಿಂಗ್ ಡಿಎಸ್ಪಿ ಭಯೋತ್ಪಾದಕರಿಗೆ ಸಿಕ್ಕಿಬಿದ್ದ ಬಳಿಕ ಬಿಡುಗಡೆಯಾಗಿದ್ದು ಹೇಗೆ?, ದೇವೇಂದ್ರ ಸಿಂಗ್ ಈಗ ಎಲ್ಲಿದ್ದಾರೆ. ಅವರ ಮೇಲೆ ಏಕೆ ದೇಶ ದ್ರೋಹದ ಪ್ರಕರಣ ದಾಖಲಾಗಿಲ್ಲ. ಪಾಕಿಸ್ತಾನ ಮತ್ತು ಭಾರತದ ಪ್ರಧಾನಿ ನಡುವೆ ಪರಸ್ಪರ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಹಾಗಾದರೆ ನಿಮ್ಮ ನಡುವಿನ ಸಂಬಂಧದ ಬಗ್ಗೆಯೂ ನಾವು ತಿಳಿದುಕೊಳ್ಳಲು ಬಯಸುತ್ತೇವೆ' ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಟ್ವಿಟ್ನಲ್ಲಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಕೊನೆ ಹಂತದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಇಂದು ಭಾಗವಹಿಸಿದ್ದ ದಿಗ್ವಿಜಯ ಸಿಂಗ್ ಅಲ್ಲಿಯೂ ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟ್ರೈಕ್ ಮತ್ತು ಆರ್ಟಿಕಲ್ 370 ರದ್ಧತಿ ಬಗ್ಗೆ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದಿದ್ದಾರೆ. 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ ಅವರು, ಪಾಕಿಸ್ತಾನದ ವಿರುದ್ಧದ 'ಸರ್ಜಿಕಲ್ ಸ್ಟ್ರೈಕ್' ಬಗ್ಗೆ ಯಾವುದೇ ಪುರಾವೆಯನ್ನು ಏಕೆ ನೀಡಿಲ್ಲ. ದೇಶ ಎಲ್ಲರಿಗೂ ಸೇರಿದ್ದು, ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದುಹಾಕಿದಾಗಿನಿಂದ ಭಯೋತ್ಪಾದನೆ ಹೆಚ್ಚಾಗಿದೆ ಎಂದು ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ.