ನವದೆಹಲಿ :ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ವಿರುದ್ಧ ವಾಗ್ದಾಳಿ ನಡೆಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಮಹಿಳೆಯರ ಮೇಲೆ ತಾಲಿಬಾನ್ ಹಾಗೂ ಆರ್‌ಎಸ್‌ಎಸ್ ಒಂದೇ ರೀತಿಯ ವಿಚಾರಧಾರೆ ಹೊಂದಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
"ಮಹಿಳೆಯರು ಮಂತ್ರಿಯಾಗಲು ಯೋಗ್ಯರಲ್ಲ ಎಂದು ತಾಲಿಬಾನ್ ಹೇಳುತ್ತದೆ. ಮಹಿಳೆಯರು ಮನೆಯಲ್ಲಿಯೇ ಗೃಹಸ್ಥೆಯಾಗಿರಬೇಕು, ಪುರುಷರು ಮಾತ್ರ ದುಡಿಯಲು ಹೋಗಬೇಕೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳುತ್ತಾರೆ. ಈ ವಿಚಾರಧಾರೆಗಳು ಒಂದೇ ಆಗಿಲ್ಲವೇ?" ಎಂದು ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದ್ದಾರೆ.
ಅಲ್ಲದೇ "ಘೋಷಿತ ಭಯೋತ್ಪಾದಕ ಸಂಘಟನೆಯ ಸದಸ್ಯರು ಮಂತ್ರಿಗಳಾಗಿರುವ ತಾಲಿಬಾನ್ ಸರ್ಕಾರವನ್ನು ಭಾರತ ಗುರುತಿಸುತ್ತದೆಯೇ ಎಂದು ಮೋದಿ-ಶಾ ಸರ್ಕಾರವು ಈಗ ಸ್ಪಷ್ಟಪಡಿಸಬೇಕಾಗಿದೆ" ಎಂದು ಟ್ವೀಟ್ ಮಾಡುವ ಮೂಲಕ ದಿಗ್ವಿಜಯ ಸಿಂಗ್ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ.