ಪನ್ನಾ (ಮಧ್ಯಪ್ರದೇಶ):ವಜ್ರಕ್ಕೆ ಹೆಸರುವಾಸಿಯಾಗಿರುವ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ಗಣಿಯಲ್ಲಿ 8.01 ಕ್ಯಾರೆಟ್ ವಜ್ರವೊಂದು ಪತ್ತೆಯಾಗಿದೆ. ಇದು ಸುಮಾರು 35 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ ಎಂದು ತಿಳಿದುಬಂದಿದೆ. ಜಿಲ್ಲಾ ವಜ್ರ ಕಚೇರಿಯಲ್ಲಿ ಸದ್ಯ ಇದನ್ನು ಠೇವಣಿ ಇಡಲಾಗಿದೆ. ವಿಶೇಷವೆಂದರೆ, ಈ ಗಣಿಯಲ್ಲಿ ಸಿಕ್ಕ 11ನೇ ವಜ್ರ ಇದಾಗಿದೆ.
ಉತ್ತರ ಪ್ರದೇಶದ ನೋಯ್ಡಾದ ನಿವಾಸಿ ರಾಣಾ ಪ್ರತಾಪ್ ಸಿಂಗ್ ಮತ್ತು ಅವರ ಪತ್ನಿ ಮೀನಾ ಈ ಗಣಿ ಮಾಲೀಕರಾಗಿದ್ದಾರೆ. ದಂಪತಿ 2021 ರಲ್ಲಿ ಪನ್ನಾಗೆ ಬಂದು ನೆಲೆಸಿದರು. ನೋಯ್ಡಾದಲ್ಲಿ ಕಟ್ಟಡ ಸಾಮಗ್ರಿಗಳ ವ್ಯವಹಾರ ನಡೆಸುತ್ತಿದ್ದ ಸಿಂಗ್ ಅದನ್ನು ಬಿಟ್ಟು ವಜ್ರದ ಗಣಿಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಬಯಸಿದ್ದರು. ಪನ್ನಾದ ಜರೂಪುರ್ ಗ್ರಾಮದ ನಿವಾಸಿ ವಿಮನ್ ಸರ್ಕಾರ್ ಎಂಬ ರೈತರ ಜಮೀನಿನಲ್ಲಿ ಅವರು ವಜ್ರ ಗಣಿ ಆರಂಭಿಸಿದರು. ಅವರ ಪತ್ನಿಯ ಹೆಸರಿನಲ್ಲಿ ಈ ಗಣಿ ನಡೆಸಲಾಗುತ್ತಿದೆ.
ವಜ್ರ ಗಣಿಯಲ್ಲಿ ಜಮೀನು ಮಾಲೀಕ ಸರ್ಕಾರ್ 20 ಪ್ರತಿಶತ ಪಾಲುದಾರಿಕೆ ಹೊಂದಿದ್ದಾರೆ. ಸಿಕ್ಕ ವಜ್ರಗಳ ಮಾರಾಟದಿಂದ ಬಂದ ಪಡೆದ ಹಣವನ್ನು ಸಿಂಗ್ ಮತ್ತು ಸರ್ಕಾರ್ ನಡುವೆ ಸಮಾನವಾಗಿ ಹಂಚಿಕೆ ಮಾಡಿಕೊಳ್ಳಲಾಗುತ್ತದೆ.
ಗಣಿಯಿಂದ ಬಂದ 11 ನೇ ವಜ್ರ:ಅದೃಷ್ಟವೆಂದರೆ, ಈ ಗಣಿಯಲ್ಲಿ ಈವರೆಗೂ 10 ವಜ್ರದ ಹರಳುಗಳು ಸಿಕ್ಕಿವೆ. ಇದರಲ್ಲಿ 9.64 ಕ್ಯಾರೆಟ್ ವಜ್ರ ದೊಡ್ಡದಾಗಿದೆ. ಉಳಿದುವು ಚಿಕ್ಕ ಪ್ರಮಾಣದ್ದಾಗಿವೆ. ಅವುಗಳನ್ನು ಈಗಾಗಲೇ ಜಿಲ್ಲಾ ವಜ್ರ ಕಚೇರಿಯಲ್ಲಿ ಠೇವಣಿ ಇಡಲಾಗಿದೆ.
ಅದೃಷ್ಟವಂತ ದಂಪತಿ:ಗಣಿಯಲ್ಲಿ ಈಗಾಗಲೇ 11 ವಜ್ರ ಹೆಕ್ಕಿರುವ ದಂಪತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಜ್ರ ಪರೀಕ್ಷಕ ಅನುಪಮ್ ಸಿಂಗ್, ಮೀನಾ ಸಿಂಗ್ ಒಡೆತನದ ಖಾಸಗಿ ಗಣಿಯ ನಿರ್ವಾಹಕರು 8.01 ಕ್ಯಾರೆಟ್ ವಜ್ರವನ್ನು ಠೇವಣಿ ಮಾಡಿದ್ದಾರೆ. ಸಿಂಗ್ ಮತ್ತು ಅವರ ಪತಿ ಚಾರ್ ಧಾಮ್ ಯಾತ್ರೆ ಕೈಗೊಂಡಿದ್ದಾರೆ. ದೇವರ ಕೃಪೆಗೆ ಪಾತ್ರರಾದಂತೆ ಈಗಾಗಲೇ ಅವರು ಯಾತ್ರೆಯ ಫಲವನ್ನು ಪಡೆಯುತ್ತಿದ್ದಾರೆಂದು ಕಾಣಿಸುತ್ತಿದೆ. ಇತ್ತ ಅವರ ಗಣಿಯಲ್ಲಿ ಮತ್ತೊಂದು ವಜ್ರ ಸಿಕ್ಕಿದೆ. ಈ ಹಿಂದೆ ಇದೇ ಗಣಿಯಲ್ಲಿ 9.64 ಕ್ಯಾರೆಟ್ ವಜ್ರ ಪತ್ತೆಯಾಗಿತ್ತು ಎಂದು ತಿಳಿಸಿದರು.
ಸಿಕ್ಕ ವಜ್ರವನ್ನು ಜಿಲ್ಲಾ ಕಚೇರಿಯಲ್ಲಿ ಠೇವಣಿ ಇಟ್ಟಿದ್ದೇವೆ. ಮಾಲೀಕರು ನೋಯ್ಡಾದಲ್ಲಿ ವಾಸಿಸುತ್ತಿರುವುದರಿಂದ ಅವರ ಪರವಾಗಿ ನಾನು ಗಣಿ ನಿರ್ವಹಿಸುತ್ತಿದ್ದೇನೆ ಎಂದು ಗಣಿ ನಿರ್ವಾಹಕ ಗೌತಮ್ ಮಿಸ್ತ್ರಿ ಹೇಳಿದರು.
ಇದನ್ನೂ ಓದಿ:ಲಾಭದಲ್ಲಿ ಕೊನೆಗೊಂಡ ಷೇರುಪೇಟೆ, ಮುಂದುವರಿದ ಗೂಳಿ ಆಟ.. ಸೆನ್ಸೆಕ್ಸ್ 367, ನಿಫ್ಟಿ 107 ಅಂಕ ಜಿಗಿತ