ನವದೆಹಲಿ:ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್ಸಿಸಿ)ನ ಸಮಗ್ರ ಪರಿಶೀಲನೆಗಾಗಿ ರಕ್ಷಣಾ ಸಚಿವಾಲಯ ರಚಿಸಿದ 15 ಸದಸ್ಯರ ಸಮಿತಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಉದ್ಯಮಿ ಆನಂದ್ ಮಹೀಂದ್ರಾ ಅವರ ಹೆಸರು ಸೇರಿದೆ.
ಮಾಜಿ ಶಾಸಕರಾದ ಬೈಜಯಂತ್ ಪಾಂಡ ನೇತೃತ್ವದ ಸಮಿತಿಯು ಕರ್ನಲ್ (ನಿವೃತ್ತ) ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯಸಭಾ ಸದಸ್ಯ ವಿನಯ್ ಸಹಸ್ರಬುದ್ಧೆ, ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಉಪ ಕುಲಪತಿ ನಜ್ಮಾ ಅಖ್ತರ್ ಅವರನ್ನು ಒಳಗೊಂಡಿದೆ.
ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ವಸುಧಾ ಕಾಮತ್, ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್ ಕನಿತ್ಕರ್, ಮೇಜರ್ ಜನರಲ್ (ನಿವೃತ್ತ) ಅಲೋಕ್ ರಾಜ್, ಎಸ್‌ಐಎಸ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಿತುರಾಜ್ ಸಿನ್ಹಾ ಮತ್ತು ಡೇಟಾಬುಕ್ ಸಿಇಒ ಆನಂದ್ ಶಾ ಸಹ ಸಮಿತಿಯ ಸದಸ್ಯರಾಗಿದ್ದಾರೆ.