ಕರ್ನಾಟಕ

karnataka

ETV Bharat / bharat

₹16 ಕೋಟಿ ವಂಚನೆ ಆರೋಪ: ಮಾಜಿ ಉದ್ಯಮ ಪಾಲುದಾರರ ವಿರುದ್ಧ ಧೋನಿ ಕೇಸ್ - ಮಹೇಂದ್ರ ಸಿಂಗ್​ ಧೋನಿ

M.S.Dhoni: ಎಂ.ಎಸ್.ಧೋನಿ​ ಹೆಸರಿನಲ್ಲಿ ಕ್ರಿಕೆಟ್​ ಅಕಾಡೆಮಿಗಳು ಮತ್ತು ಕ್ರೀಡಾ ಸಂಕೀರ್ಣಗಳನ್ನು ಸ್ಥಾಪಿಸಿ ವಂಚಿಸಿದ ಆರೋಪದ ಮೇಲೆ ಜಾರ್ಖಂಡ್​ನ ರಾಂಚಿ ನ್ಯಾಯಾಲಯದಲ್ಲಿ ಇಬ್ಬರು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

MS Dhoni
ಎಂ.ಎಸ್.ಧೋನಿ

By PTI

Published : Jan 5, 2024, 8:40 PM IST

ರಾಂಚಿ(ಜಾರ್ಖಂಡ್​):ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸುವ ಒಪ್ಪಂದದ ವಿಷಯದಲ್ಲಿ ಸುಮಾರು 16 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ತಮ್ಮ ವ್ಯವಹಾರದ ಇಬ್ಬರು ಮಾಜಿ ಪಾಲುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಕೇಸು ದಾಖಲಿಸಿದ್ದಾರೆ. ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿಯಾದ ಆರ್ಕಾ ಸ್ಪೋರ್ಟ್ಸ್‌ನ ಇಬ್ಬರು ನಿರ್ದೇಶಕರ ವಿರುದ್ಧ ಕೆಳ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ಧೋನಿ ಪರ ವಕೀಲರು ತಿಳಿಸಿದ್ದಾರೆ.

ಎಂ.ಎಸ್​.ಧೋನಿ ಪರ ವಕೀಲ, ಪಾಟ್ನಾದ ವಿಧಿ ಅಸೋಸಿಯೇಟ್ಸ್‌ ಎಂಬ ಕಾನೂನು ಸಂಸ್ಥೆಯ ದಯಾನಂದ್ ಸಿಂಗ್ ಮಾತನಾಡಿ, ಖ್ಯಾತ ಕ್ರಿಕೆಟಿರ್​ ಪರವಾಗಿ ರಾಂಚಿಯ ಸಕ್ಷಮ ನ್ಯಾಯಾಲಯದಲ್ಲಿ ಅರ್ಕಾ ಸ್ಪೋರ್ಟ್ಸ್ ನಿರ್ದೇಶಕರಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ಬಿಸ್ವಾಸ್ ವಿರುದ್ಧ ಐಪಿಸಿಯ ಸೆಕ್ಷನ್ 406 ಮತ್ತು 420ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಹೇಳಿದರು.

ಭಾರತ ಮತ್ತು ವಿದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಆರೋಪಿಗಳು 2017ರಲ್ಲಿ ಧೋನಿ ಅವರನ್ನು ಸಂಪರ್ಕಿಸಿದ್ದರು. ಆರಂಭದಲ್ಲಿ ಸಂಪೂರ್ಣ ಫ್ರಾಂಚೈಸಿ ಶುಲ್ಕವನ್ನು ಸ್ವೀಕರಿಸಿ, ಲಾಭವನ್ನು ಧೋನಿ ಮತ್ತು ಪಾಲುದಾರರ ನಡುವೆ 70:30 ಆಧಾರದ ಮೇಲೆ ಹಂಚಿಕೊಳ್ಳುವ ಬಗ್ಗೆ ಒಪ್ಪಂದ ಏರ್ಪಟ್ಟಿತ್ತು. ಆದಾಗ್ಯೂ, ಪಾಲುದಾರರು ಧೋನಿ ಅವರಿಗೆ ತಿಳಿಸದೆ ಅಕಾಡೆಮಿಗಳನ್ನು ಸ್ಥಾಪಿಸಲು ಪ್ರಾರಂಭಿಸಿದ್ದರು. ಇದಕ್ಕೆ ಯಾವುದೇ ಶುಲ್ಕ ಪಾವತಿಸಲಿಲ್ಲ. ಅಲ್ಲದೇ, ಅವರಿಗೆ ಒದಗಿಸಲಾಗಿದ್ದ ಅಧಿಕಾರ ಪತ್ರವನ್ನು 2021ರ ಆಗಸ್ಟ್ 15ರಂದು ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಇದರ ಹೊರತಾಗಿಯೂ ಧೋನಿ ಅವರೊಂದಿಗೆ ಯಾವುದೇ ಮೊತ್ತ ಅಥವಾ ಮಾಹಿತಿಯನ್ನು ಪಾಲುದಾರರು ಹಂಚಿಕೊಳ್ಳದೆ, ಅವರ ಹೆಸರಿನಲ್ಲಿ ಕ್ರಿಕೆಟ್​ ಅಕಾಡೆಮಿಗಳು ಮತ್ತು ಕ್ರೀಡಾ ಸಂಕೀರ್ಣಗಳನ್ನು ಸ್ಥಾಪಿಸುವುದನ್ನು ಮುಂದುವರೆಸಿದ್ದರು. ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎರಡು ಬಾರಿ ಲೀಗಲ್ ನೋಟಿಸ್ ನೀಡಲಾಗಿದೆ. ಆರೋಪಿಗಳು ಎಂಟರಿಂದ ಹತ್ತು ಸ್ಥಳಗಳಲ್ಲಿ ಅಕಾಡೆಮಿಗಳನ್ನು ತೆರೆದು ಹಾಗೂ ಹಣ ಪಡೆದು ಧೋನಿ ಅವರಿಗೆ 16 ಕೋಟಿ ರೂಪಾಯಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ವಕೀಲ ಸಿಂಗ್ ವಿವರಿಸಿದರು.

ಈ ಸಂಬಂಧ ರಾಂಚಿಯ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ನಲ್ಲಿ 2023ರ ಅಕ್ಟೋಬರ್ 27ರಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಶುಕ್ರವಾರ, ಧೋನಿ ಅವರ ಪರ ಅಧಿಕೃತ ಪ್ರತಿನಿಧಿಯಾಗಿ ಸೀಮಂತ್ ಲೋಹಾನಿ ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಐಷಾರಾಮಿ ಹೋಟೆಲ್, ರಿಷಭ್ ಪಂತ್‌ಗೆ ವಂಚನೆ: ಯುವ ಕ್ರಿಕೆಟಿಗನ ಬಂಧನ

ABOUT THE AUTHOR

...view details