ರಾಯ್ಪುರ(ಚತ್ತೀಸ್ಗಢ): ರಾಯ್ಪುರದ ರಾವಣಭಟ್ಟ ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನಗಳ ಧರ್ಮ ಸಂಸದ್ನ ಕೊನೆಯ ದಿನದಂದು ಭಾರಿ ಗದ್ದಲ ಉಂಟಾಗಿದೆ. ಧರ್ಮ ಸಂಸತ್ತಿನಲ್ಲಿ ಉಪಸ್ಥಿತರಿದ್ದ ಧಾರ್ಮಿಕ ಗುರು ಕಲಿಚರಣ್ ಮಹಾರಾಜ್ ಅವರು ನಾಥೂರಾಂ ಗೋಡ್ಸೆಗೆ ನಮನ ಸಲ್ಲಿಸಿದರು. ಆಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಲಿಚರಣ್ ಮಹಾರಾಜರ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ.
ಇವರ ವಿರುದ್ಧ ರಾಯ್ಪುರದ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಈ ಇಡೀ ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪಕ್ಕೆ ಮುಂದಾಗಿವೆ.
1947ರಲ್ಲಿ ದೇಶ ವಿಭಜನೆಯಾಗಲು ಮಹಾತ್ಮ ಗಾಂಧಿ ಕಾರಣ, ಅವರು ದೇಶವನ್ನು ನಾಶಪಡಿಸಿದರು ಎಂದು ಹೇಳುತ್ತಾ ಗಾಂಧೀಜಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ಸಂತ ಕಲಿಚರಣ್ ಹೊಗಳಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ಧರ್ಮ ಸಂಸದ್ನಲ್ಲಿ ಗೋಡ್ಸೆ ಹೊಗಳಿ ಗಾಂಧಿ ತೆಗಳಿದ ಸಂತ ಕಲಿಚರಣ್; ವೇದಿಕೆ ತೊರೆದ ಮಹಾಂತ್ ರಾಮ ಸುಂದರ್ ದಾಸ್
ಮಹಾರಾಷ್ಟ್ರದ ಸಚಿವ ಮತ್ತು ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರು ಕಲಿಚರಣ್ ಮಹಾರಾಜ್ ಅವರಿಗೆ ಟ್ವೀಟ್ ಮಾಡುವ ಮೂಲಕ ಲೇವಡಿ ಮಾಡಿದ್ದಾರೆ. ಸುಳ್ಳು ಮತ್ತು ಹಿಂಸಾಚಾರದಿಂದ ಸತ್ಯ ಮತ್ತು ಅಹಿಂಸೆಯನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಹಾಗೆಯೇ ಬಾಪು ನಮಗೆ ನಾಚಿಕೆಯಾಗುತ್ತಿದೆ, ನಿಮ್ಮ ಕೊಲೆಗಾರರು ಬದುಕಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಮಹಾತ್ಮ ಗಾಂಧಿಯವರ ಚಿಂತನೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ನೀವು ನನ್ನನ್ನು ಸರಪಳಿಯಲ್ಲಿ ಬಂಧಿಸಬಹುದು, ಹಿಂಸಿಸಬಹುದು, ಈ ದೇಹವನ್ನು ನಾಶಪಡಿಸಬಹುದು. ಆದರೆ ನೀವು ನನ್ನ ಆಲೋಚನೆಗಳನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಗಾಂಧಿ ಉದ್ದೇಶಿಸಿ ಬರೆದಿದ್ದಾರೆ.
ಈ ಭೂಮಿ ಶಾಂತಿಯುತವಾಗಿದೆ ಎಂದು ಹೇಳಿದರು. ಪ್ರೀತಿಯಿಂದ ಕೂಡಿದೆ. ಸಹೋದರತ್ವದಿಂದ ಕೂಡಿದೆ. ಇದು ಗುರು ಘಾಸಿದಾಸರ ನಾಡು. ಇಲ್ಲಿ ಪ್ರಚೋದನಕಾರಿ ಮಾತು, ಅಹಿಂಸಾತ್ಮಕ ಮಾತುಗಳನ್ನು ಸಹಿಸುವುದಿಲ್ಲ ಎಂದು ಸಿಎಂ ಭೂಪೇಶ್ ಬಘೇಲ್ ಹೇಳಿದ್ದಾರೆ.
ಜಬಲ್ಪುರದ ಕಾಂಗ್ರೆಸ್ನ ರಾಜ್ಯಸಭಾ ಸಂಸದ ವಿವೇಕ್ ತಂಖಾ ಕೂಡ ಈ ವಿಷಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಷ್ಟ್ರಪಿತನ ಕುರಿತು ಮಾಡಿರುವ ಈ ಮಾತು ತಪ್ಪು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಯಾರೂ ಕಾನೂನಿಗಿಂತ ಮೇಲಲ್ಲ. ಸಂವಿಧಾನ ಮತ್ತು ರಾಷ್ಟ್ರಪಿತನನ್ನು ಅಪಮಾನಿಸಲು ಯಾರಿಗೂ ಅವಕಾಶವಿಲ್ಲ. ಈ ರೀತಿಯ ಕೆಲಸ ಮಾಡಿದವರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದಿದ್ದಾರೆ.
ಪ್ರತಿಪಕ್ಷದ ನಾಯಕ ಧರ್ಮಲಾಲ್ ಕೌಶಿಕ್ ಮಾತನಾಡಿ, ಈಗ ಎಫ್ಐಆರ್ ದಾಖಲಿಸಲಿ ಅಥವಾ ಘಟನೆಯನ್ನು ಖಂಡಿಸಲಿ, ಆಡಿದ ಮಾತುಗಳನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಮಹಾತ್ಮ ಗಾಂಧೀಜಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಗಮನ ಸೆಳೆದಿರುವ ಕಲಿಚರಣ್ ಮಹಾರಾಜ್, ಮಹಾರಾಷ್ಟ್ರದ ಅಕೋಲಾದ ಹಳೆನಗರದ ಶಿವಾಜಿ ನಗರದ ನಿವಾಸಿ. ಅವರ ನಿಜವಾದ ಹೆಸರು ಅಭಿಜಿತ್ ಧನಂಜಯ್ ಸರಾಗ್. ಅವರು ಭಾವಸಾರ್ ಸಮಾಜಕ್ಕೆ ಸೇರಿದವರು. ಕಲಿಚರಣ್ ಮಹಾರಾಜರು ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಧನಂಜಯ್ ಸರಾಗ್ ಅವರು ಅಕೋಲಾದ ಜಯನ್ ಚೌಕ್ನಲ್ಲಿ ಮೆಡಿಕಲ್ ಶಾಪ್ ಹೊಂದಿದ್ದಾರೆ.
ಕಲಿಚರಣ್ ಮಹಾರಾಜರಿಗೆ ಬಾಲ್ಯದಿಂದಲೂ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ. ಈ ಕಾರಣಕ್ಕಾಗೆ ಅವರ ಪೋಷಕರು ಅವನನ್ನು ಇಂದೋರ್ಗೆ ಕಳುಹಿಸಿದ್ದರು. ಇಲ್ಲೇ ಇದ್ದುಕೊಂಡು ಹಿಂದಿ ಮಾತನಾಡಲು ಕಲಿತರು. ಭಯ್ಯಾಜಿ ಮಹಾರಾಜರ ಆಶ್ರಮಕ್ಕೆ ಹೋಗತೊಡಗಿದರು. ಇಲ್ಲಿಂದ ಅವರ ಆಧ್ಯಾತ್ಮಿಕ ಜೀವನ ಪ್ರಾರಂಭವಾಯಿತು ಮತ್ತು ಅವರು ಕಲಿಚರಣ್ ಎಂಬ ಹೆಸರನ್ನು ಪಡೆದರು.
ಕಲಿಚರಣ್ ಅಲಿಯಾಸ್ ಅಭಿಜೀತ್ ಹರಿಹರಪೇಟೆಯ ಟೌನ್ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದಿದ್ದಾರೆ. ಅವರು ಓದಿದ್ದು 8ನೇ ತರಗತಿವರೆಗೆ ಮಾತ್ರ.