ಧಾರ್(ಮಧ್ಯಪ್ರದೇಶ) :ಅತ್ತೆಯ ಕಿರುಕುಳದಿಂದ ಮನನೊಂದು ಅನೇಕ ವಿವಾಹಿತ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ನೂರಾರು ಪ್ರಕರಣಗಳು ನಮ್ಮ ಕಣ್ಮುಂದೆ ಇವೆ. ಆದರೆ, ಮಧ್ಯಪ್ರದೇಶದಲ್ಲೊಂದು ವಿಭಿನ್ನ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಕೋವಿಡ್ನಿಂದಾಗಿ ಮಗ ಸಾವನ್ನಪ್ಪಿರುವ ಕಾರಣ, ಸೊಸೆಗೆ ಬೇರೊಂದು ಮದುವೆ ಮಾಡಿಸಿರುವ ಅತ್ತೆ, ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಲೆ ಉಡುಗೊರೆಯಾಗಿ ನೀಡಿದ್ದಾರೆ.
ಸೊಸೆಗೆ ಮದುವೆ ಮಾಡಿಸಿ, ಬಂಗಲೆ ಗಿಫ್ಟ್ ನೀಡಿದ ಅತ್ತೆ ಮಧ್ಯಪ್ರದೇಶದ ಧಾರ್ನಲ್ಲಿ ಇಂತಹ ಒಂದು ಅಪರೂಪದ ಘಟನೆ ನಡೆದಿದೆ. ಕೋವಿಡ್ನಿಂದ ತಮ್ಮ ಮಗನ ಸಾವಿನ ನಂತರ ಸೊಸೆಗೆ ಬೇರೆ ವ್ಯಕ್ತಿ ಜೊತೆ ಮದುವೆ ಮಾಡಿಸಿದ್ದಾರೆ. ಇದರ ಜೊತೆಗೆ ಅವರಿಗೆ 50 ಲಕ್ಷ ರೂಪಾಯಿ ಮೌಲ್ಯದ ಬಂಗಲೆ ಗಿಫ್ಟ್ ಆಗಿ ನೀಡಿದ್ದಾರೆ. ಸೊಸೆಯನ್ನ ಬೇರೊಂದು ಮನೆಯಲ್ಲಿ ಬಿಟ್ಟು ಹೋಗುವ ಸಂದರ್ಭದಲ್ಲಿ ಕಣ್ಣೀರು ಹಾಕಿರುವ ಘಟನೆ ಸಹ ನಡೆದಿದೆ.
ಇದನ್ನೂ ಓದಿ:'ಹಿಂದಿ ಮಾತನಾಡೋರು ನಮ್ಮಲ್ಲಿ ಪಾನಿಪುರಿ ಮಾರ್ತಿದ್ದಾರೆ': ತಮಿಳುನಾಡು ಉನ್ನತ ಶಿಕ್ಷಣ ಸಚಿವ
ಮಧ್ಯಪ್ರದೇಶದ ಧಾರ್ನಲ್ಲಿ ವಾಸವಾಗಿರುವ ತಿವಾರಿ ಎಂಬುವರ ಕುಟುಂಬ ಈ ಸ್ಫೂರ್ತಿದಾಯಕ ಕೆಲಸ ಮಾಡಿದೆ. ಧಾರ್ ನಿವಾಸಿ ಪ್ರಿಯಾಂಕ್ ತಿವಾರಿ 2021ರಲ್ಲಿ ರಿಚಾ ಎಂಬ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದನು. ಇದರ ಮಧ್ಯೆ ಕಳೆದ ಏಪ್ರಿಲ್ ತಿಂಗಳಲ್ಲಿ ಪ್ರಿಯಾಂಕ್ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಕೋವಿಡ್ನಿಂದ ಸಾವನ್ನಪ್ಪಿದ್ದಾನೆ.
ಪ್ರಿಯಾಂಕ್ ಜೊತೆ ಮದುವೆ ಮಾಡಿಕೊಂಡಿದ್ದ ರಿಚಾ ಘಟನೆ ಬಳಿಕ ಕೂಡ ರಿಚಾ ತನ್ನ ಮಗಳೊಂದಿಗೆ ಅತ್ತೆ ಜೊತೆ ವಾಸ ಮಾಡುತ್ತಿದ್ದಳು. ಇದರ ಮಧ್ಯೆ ರಿಚಾ ಅವರ ಮಾವ ಯುಗ್ ತಿವಾರಿ ಸೊಸೆಗಾಗಿ ಹೊಸ ಮನೆ ನಿರ್ಮಿಸಿದ್ದರು. ಆದರೆ, ಮಗ ಸಾವನ್ನಪ್ಪಿದ್ದರಿಂದ ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ವಾಸವಾಗಿರುವ ಅರುಣ್ ಮಿಶ್ರಾ ಅವರೊಂದಿಗೆ ಸೊಸೆ ರಿಚಾ ಮದುವೆ ಮಾಡಿಸಿ, ಆಕೆಗೋಸ್ಕರ ನಿರ್ಮಾಣ ಮಾಡಿದ ಹೊಸ ಮನೆ ಉಡುಗೊರೆಯಾಗಿ ನೀಡಿದ್ದಾರೆ.
ರಿಚಾ ಬೇರೊಂದು ಮನೆಗೆ ಹೋಗುವಾಗ ತಿವಾರಿ ಕುಟುಂಬದ ಸದಸ್ಯರ ಕಣ್ಣು ತೇವಗೊಂಡವು. ಈ ವೇಳೆ ಅತ್ತೆ ರಾಗಿಣಿ ಅನೇಕ ಸಲ ಸೊಸೆಯನ್ನ ತಬ್ಬಿಕೊಂಡು ಕಣ್ಣೀರು ಸಹ ಹಾಕಿದ್ದಾರೆ. ಕಳೆದ ಅಕ್ಷಯ ತೃತೀಯಾದಂದು ಈ ಮದುವೆ ಕಾರ್ಯಕ್ರಮ ನಡೆದಿದೆ.