ಮಧ್ಯಪ್ರದೇಶ: ಇಲ್ಲಿನ ಧಾರ್ ಜಿಲ್ಲೆಯ ಖಲ್ಘಾಟ್ ಎಂಬಲ್ಲಿ ಇಂದು ಬೆಳಗ್ಗೆ ನದಿಗೆ ಬಸ್ ಬಿದ್ದು ದುರಂತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 13 ಪ್ರಯಾಣಿಕರು ಮೃತಪಟ್ಟಿದ್ದು, ನದಿಯಿಂದ ಶವಗಳನ್ನು ಹೊರೆತೆಗೆಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಂದು ಮಗು, ನಾಲ್ಕು ಮಹಿಳೆಯರು ಸೇರಿ 13 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಸಾರಿಗೆ ಸಮಸ್ಥೆಯ ಬಸ್ 30-32 ಪ್ರಯಾಣಿಕರೊಂದಿಗೆ ಮಧ್ಯಪ್ರದೇಶದ ಇಂದೋರ್ನಿಂದ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಗೆ ಹೋಗುತ್ತಿತ್ತು. ಬೆಳಿಗ್ಗೆ 10 ರಿಂದ 10.15ರ ವೇಳೆಗೆ ಬಸ್ ಬ್ರಿಡ್ಜ್ ಬದಿಗೆ ಡಿಕ್ಕಿ ಹೊಡೆದು, ನರ್ಮದಾ ನದಿಗೆ ಉರುಳಿ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಧಾರ್ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಇದುವರೆಗೆ 15 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದಿದ್ದಾರೆ.