ಚೆನ್ನೈ: ನಟ ಧನುಷ್ ಅವರು ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಬರೋಬ್ಬರಿ 18 ವರ್ಷಗಳ ಅವರ ವಿವಾಹದ ಪಯಣಕ್ಕೆ ಫುಲ್ಸ್ಟಾಪ್ ಇಟ್ಟಿದ್ದಾರೆ. ಈ ಮೂಲಕ ರಜನಿಕಾಂತ್ ಅವರ ಪುತ್ರಿಯಾದ ಐಶ್ವರ್ಯ ಅವರಿಂದ ಪ್ರತ್ಯೇಕಗೊಂಡಿದ್ದಾರೆ.
ಈ ಸಂಬಂಧ ಟ್ವಿಟರ್ನಲ್ಲಿ ಧನುಷ್ ಅವರು ಬರೆದುಕೊಂಡಿದ್ದು, ಸ್ನೇಹಿತರು, ದಂಪತಿಗಳು, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳ ಕಾಲ ಜೀವನ ಮಾಡಿದೆವು. ಈ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ ಎಂದು ಬರೆದಿದ್ದಾರೆ.
ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದಿರುವ ಅವರು, ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಗೌಪ್ಯತೆಯನ್ನು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ಅವರನ್ನು 18 ನವೆಂಬರ್ 2004 ರಂದು ವಿವಾಹವಾಗಿದ್ದರು. ಈ ದಂಪತಿಗೆ 2006 ಮತ್ತು 2010 ರಲ್ಲಿ ಇಬ್ಬರು ಮಕ್ಕಳು ಜನಿಸಿದ್ದಾರೆ.
ಐಶ್ವರ್ಯ ಅವರ ಮೊದಲ ನಿರ್ದೇಶನದ '3' ನಲ್ಲಿ ಧನುಷ್ ಕೆಲಸ ಮಾಡಿದ್ದರು ಮತ್ತು ಚಿತ್ರದ 'ಕೊಲವೆರಿ ಡಿ' ಹಾಡು ತಕ್ಷಣವೇ ಹಿಟ್ ಆಗಿ ಎಲ್ಲಾ ಕಡೆ ಸದ್ದು ಮಾಡಿತ್ತು.