ಡೆಹ್ರಾಡೂನ್ :45ನೇ ವಯಸ್ಸಿನಲ್ಲಿ ಉತ್ತರಾಖಂಡ್ನ 11ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಪುಷ್ಕರ್ ಸಿಂಗ್ ಧಾಮಿ ಗುಡ್ಡಗಾಡು ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ, ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು 49ನೇ ವಯಸ್ಸಿನಲ್ಲಿ ಉತ್ತರಾಖಂಡ್ನ ಮುಖ್ಯಮಂತ್ರಿಯಾಗಿ ರಾಜ್ಯದ ಅತಿ ಕಿರಿಯ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆ ಪುಷ್ಕರ್ ಸಿಂಗ್ ಧಾಮಿ ಪಾಲಾಗಿದೆ.
ಧಾಮಿ ಕುಮಾವೂನ್ ಪ್ರದೇಶದಲ್ಲಿ ಖತಿಮಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಧಾಮಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಆಪ್ತರು ಎನ್ನಲಾಗಿದೆ. ಜೊತೆಗೆ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಭಗತ್ ಸಿಂಗ್ ಕೊಶಿಯಾರಿಯವರಿಗೆ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಸಹ ಧಾಮಿ ಸೇವೆ ಸಲ್ಲಿಸಿದ್ದಾರೆ.
ಪುಷ್ಕರ್ ಸಿಂಗ್ ಧಾಮಿ 1990ರಲ್ಲಿ ಮೊದಲ ಬಾರಿಗೆ ಯುವ ರಾಜಕೀಯಕ್ಕೆ ಎಂಟ್ರಿ ಕೊಟ್ರು. 1999ರವರೆಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ (ABVP)ಲ್ಲಿ ಹಾಗೂ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವಿದ್ಯಾರ್ಥಿ ವಿಭಾಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ರು.