ನವದೆಹಲಿ: ಸಂಚರಿಸುತ್ತಿದ್ದ ವಿಮಾನದಲ್ಲೇ ವಿವಾಹ ಕಾರ್ಯ ನಡೆದ ಹಿನ್ನೆಲೆ ತನಿಖೆ ಆರಂಭಿಸಿದ್ದು, ಸಿಬ್ಬಂದಿಯನ್ನು ಕರ್ತವ್ಯದಿಂದ ಹೊರಗಿಡಲು ಭಾರತದ ವಾಯುಯಾನ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಆದೇಶ ನೀಡಿದ್ದಾರೆ.
ಆನ್‌ಬೋರ್ಡ್ ವಿವಾಹ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಹಾಗೂ ಕೊರೊನಾ ನಿಯಮವನ್ನು ಉಲ್ಲಂಘಿಸಿದ ಎಲ್ಲ ಪ್ರಯಾಣಿಕರ ವಿರುದ್ಧ ದೂರು ದಾಖಲಿಸುವಂತೆ ಡಿಜಿಸಿಎ ತಿಳಿಸಿದೆ.
ವಿಮಾನಯಾನ ಸದಸ್ಯರನ್ನು ಹಾಗೆ ಕೊರೊನಾ ನಿಯಮ ಅನುಸರಿಸದವರ ವಿರುದ್ಧ ದೂರು ನೀಡಲು ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಘಟನೆ?
ತಮಿಳುನಾಡಿನ ಮಧುರೈನಿಂದ ಹಾರಿದ್ದ ಈ ಚಾರ್ಟರ್ಡ್ ವಿಮಾನದಲ್ಲಿ ವಿವಾಹ ಕಾರ್ಯ ನೆರವೇರಿತ್ತು. ಇನ್ನು ಸಂಬಂಧಿಕರು ಮತ್ತು ಅತಿಥಿಗಳು ಒಂದೇ ವಿಮಾನದಲ್ಲಿದ್ದರು.
ಭಾನುವಾರ ಮಧುರೈ ಮೂಲದ ಖಾಸಗಿ ವ್ಯಕ್ತಿಯೊಬ್ಬರು ವಿವಾಹ ಸಮಾರಂಭಕ್ಕಾಗಿ ಚಾರ್ಟರ್ ಫ್ಲೈಟ್ ಅನ್ನು ಕಾಯ್ದಿರಿಸಿದ್ದರು. ಆದರೆ ವಿವಾಹ ನಡೆಯುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ಸೆಂಥಿಲ್ ವಲವಾನ್ ಮಾಹಿತಿ ನೀಡಿದ್ದಾರೆ.
ಆಕಾಶದಲ್ಲಿ ನಡೆದ ಈ ವಿವಾಹ ಸಮಾರಂಭದ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಪ್ರಮುಖವಾದ ವಿಷಯ ಎಂದರೆ ಆ ಸಂದರ್ಭದಲ್ಲಿ ಯಾರೂ ಕೂಡ ಕೊರೊನಾ ನಿಯಮ ಪಾಲಿಸಿಲ್ಲ.