ನವದೆಹಲಿ:ದಟ್ಟಮಂಜಿನ ವಾತಾವರಣದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಮಾನ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗುತ್ತಿದೆ. ಇಂಥ ಸಂದರ್ಭಗಳು ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತವೆ. ವಿಮಾನಕ್ಕಾಗಿ ಕಾಯುವ ವೇಳೆ ಕನಿಷ್ಠ ಸೌಲಭ್ಯಗಳಾದ ಊಟದ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಬೋರ್ಡಿಂಗ್ ಏರಿಯಾದಲ್ಲೇ ಧರಣಿ ಕುಳಿತ ಘಟನೆಗಳು ವರದಿಯಾಗಿವೆ. ಇಂತಹ ಲೋಪದೋಷಗಳನ್ನು ತಪ್ಪಿಸಲು ನಾಗರಿಕ ವಿಮಾನಯಾನ ಇಲಾಖೆ ಕೆಲವು ಕ್ರಮಗಳನ್ನು ಕೈಗೊಂಡಿದೆ. ಹವಾಮಾನ ವೈಪರೀತ್ಯದಿಂದಾಗಿ ಮೂರು ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ವಿಳಂಬವಾದರೆ, ಮೊದಲೇ ಅವುಗಳನ್ನು ರದ್ದುಗೊಳಿಸಬಹುದು ಎಂದು ಡಿಜಿಸಿಎ ತಿಳಿಸಿದೆ.
ಡಿಜಿಸಿಎ ಹೊಸ ಮಾರ್ಗಸೂಚಿಗಳ ವಿವರ:ವಿಮಾನಗಳ ರದ್ದತಿ, ಪೂರ್ವಸೂಚನೆ ಇಲ್ಲದೇ ವಿಳಂಬ ಮತ್ತು ಬೋರ್ಡಿಂಗ್ ನಿರಾಕರಣೆ ಪ್ರಕರಣಗಳಲ್ಲಿ ಪ್ರಯಾಣಿಕರಿಗೆ ಸಂಪೂರ್ಣ ರಕ್ಷಣೆ ಮತ್ತು ಸೌಲಭ್ಯಗಳನ್ನು ಒದಗಿಸಬೇಕು. ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾಗುವ ಸಾಧ್ಯತೆ ಇದ್ದಾಗ ಅವುಗಳನ್ನು ಮುಂಚಿತವಾಗಿಯೇ ರದ್ದುಗೊಳಿಸಲು ಅನುಮತಿ ನೀಡಲಾಗಿದೆ. ಈ ನಿಯಮಗಳನ್ನು ತಕ್ಷಣವೇ ಪಾಲಿಸಬೇಕು.
ವಿಮಾನ ವಿಳಂಬದ ಬಗ್ಗೆ ನಿಖರ ಮಾಹಿತಿಯನ್ನು ಆಯಾ ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಬೇಕು. ಮುಂಗಡ ಮಾಹಿತಿಯನ್ನು ಪ್ರಯಾಣಿಕರಿಗೆ ಎಸ್ಎಂಎಸ್/ವಾಟ್ಸ್ಆ್ಯಪ್ ಮತ್ತು ಇ-ಮೇಲ್ ರೂಪದಲ್ಲಿ ತಿಳಿಸಬೇಕು. ವಿಳಂಬದ ಬಗ್ಗೆ ನೈಜ ಮಾಹಿತಿಯನ್ನು ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರಿಗೆ ನೀಡಬೇಕು. ಪ್ರಯಾಣಿಕರೊಂದಿಗೆ ಸಮಾಲೋಚಿಸಲು ಮತ್ತು ಮಾರ್ಗದರ್ಶನ ನೀಡಲು ಸೂಕ್ತ ಸಿಬ್ಬಂದಿ ಲಭ್ಯವಿರಬೇಕು. ವಿಮಾನ ನಿಲ್ದಾಣದಲ್ಲಿ ದಟ್ಟಣೆ ತಪ್ಪಿಸುವುದು, ಪ್ರಯಾಣಿಕರಿಗೆ ಅನನುಕೂಲತೆಯನ್ನು ಕಡಿಮೆ ಮಾಡುವುದು ಇವುಗಳ ಉದ್ದೇಶ ಎಂದು ಡಿಜಿಸಿಎ ಹೇಳಿದೆ.