ನವದೆಹಲಿ:ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಇದರ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ಇದೀಗ ಸಶಸ್ತ್ರ ಪಡೆಗಳ ನಿವೃತ್ತ ವೈದ್ಯರನ್ನ ನೇಮಕ ಮಾಡಲಾಗುತ್ತಿದ್ದು, ಅದಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ.
ಮಾಜಿ ಸೇನಾ ವೈದ್ಯಕೀಯ ದಳ(ಎಎಂಸಿ), ಶಾರ್ಟ್ ಸರ್ವೀಸ್ ಕಮಿಷನ್(ಎಸ್‌ಎಸ್‌ಸಿ), ವೈದ್ಯಕೀಯ ಅಧಿಕಾರಿಗಳ ನೇಮಕಾತಿಗಾಗಿ ರಕ್ಷಣಾ ಸಚಿವಾಲಯ ಇದೀಗ ಅನುಮೋದನೆ ನೀಡಿದೆ.
ಟೂರ್ ಆಫ್ ಡ್ಯೂಟಿ ಯೋಜನೆ ಅಡಿ 2017 ಮತ್ತು 2021ರ ನಡುವೆ ಬಿಡುಗಡೆಯಾಗಿರುವ 400 ವೈದ್ಯರನ್ನ 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ.
ಮಾಜಿ ಸೇನಾ ವೈದ್ಯಕೀಯ ದಳ (ಎಎಂಸಿ), ಶಾರ್ಟ್ ಸರ್ವಿಸ್ ಕಮಿಷನ್ (ಎಸ್‌ಎಸ್‌ಸಿ) ವೈದ್ಯಕೀಯ ಅಧಿಕಾರಿಗಳ ನೇಮಕಾತಿಗಾಗಿ ರಕ್ಷಣಾ ಸಚಿವಾಲಯ ಆದೇಶ ಹೊರಡಿಸಿದ್ದು, ಕೆಲವೇ ದಿನಗಳಲ್ಲಿ ಇವರ ನೇಮಕ ಮಾಡುವ ನಿರೀಕ್ಷೆ ಇದೆ. ಆದರೆ ಇವರು ಕರ್ತವ್ಯ ನಿರ್ವಹಿಸಲು ದೈಹಿಕವಾಗಿ ಸದೃಢವಾಗಿರಬೇಕು ಎಂದು ಹೇಳಿದೆ.
ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ರಕ್ಷಣಾ ಸಚಿವಾಲಯ ಅನೇಕ ಕ್ರಮ ಕೈಗೊಂಡಿದ್ದು, ಎಎಫ್ಎಂಎಸ್ ವಿವಿಧ ಆಸ್ಪತ್ರೆಗಳಲ್ಲಿ ತಜ್ಞರು, ಸೂಪರ್ ಸ್ಪೆಷಲಿಸ್ಟ್ ಮತ್ತು ಅರೆ ವೈದ್ಯರು ಸೇರಿದಂತೆ ಹೆಚ್ಚುವರಿ ವೈದ್ಯರ ನಿಯೋಜನೆ ಮಾಡಿದೆ.
ಇದಲ್ಲದೆ ದೇಶದ ಎಲ್ಲ ನಾಗರಿಕರಿಗೆ ಸಂಜೀವನಿ ಒಪಿಡಿ ಕುರಿತು ಆನ್ಲೈನ್ ಉಚಿತ ಸಮಾಲೋಚನೆ ನೀಡಲು ಮಾಜಿ ರಕ್ಷಣಾ ವೈದ್ಯರಿಗೆ ನೇಮಕ ಮಾಡಲಾಗಿದೆ.