ಅಯೋಧ್ಯಾ (ಉತ್ತರ ಪ್ರದೇಶ):ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವು ವೇಳಾಪಟ್ಟಿಯಂತೆ ನಡೆಯುತ್ತಿದೆ ಮತ್ತು 2023ರ ವೇಳೆಗೆ ಭಕ್ತರು ಶ್ರೀರಾಮನ ದರ್ಶನ ಪಡೆಯಬಹುದು ಎಂದು ರಾಮ ಮಂದಿರ ಟ್ರಸ್ಟ್ ಮೂಲಗಳು ತಿಳಿಸಿವೆ.
ರಾಮಮಂದಿರ ನಿರ್ಮಾಣದ ಪರಿಶೀಲನಾ ಸಭೆ ಆಗಸ್ಟ್ 27ರಿಂದ ಆಗಸ್ಟ್ 29ರವರೆಗೆ ನಡೆದಿದೆ. ಈ ಪರಿಶೀಲನಾ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಜೊತೆಗೆ 2023ರ ವೇಳೆಗೆ ದೇವಾಲಯಕ್ಕೆ ಭಕ್ತರ ಪ್ರವೇಶ ಕಲ್ಪಿಸಲು ನಿರ್ಧಾರ ಮಾಡಲಾಗಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
ರಾಮ ಮಂದಿರ ಟ್ರಸ್ಟ್ ಮೂಲಗಳ ಪ್ರಕಾರ, ಪಾರ್ಕೋಟಾ(ದೇವಾಲಯದ ಸುತ್ತಲೂ ಬಲವಾದ ಗೋಡೆ) ಹೊರಗಿನ ಆವರಣಕ್ಕಾಗಿ ಪ್ರಾಥಮಿಕವಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ವಿನ್ಯಾಸ ಮತ್ತು ಡ್ರಾಯಿಂಗ್ ಕೆಲಸಗಳು ಪೂರ್ಣಗೊಂಡಿವೆ. ಯಾತ್ರಾ ಸೌಲಭ್ಯ ಕೇಂದ್ರ, ಮ್ಯೂಸಿಯಂ, ಆರ್ಕೈವ್ಸ್, ಆಡಿಟೋರಿಯಂ, ಗೋಶಾಲೆ, ಯಜ್ಞ ಶಾಲೆ, ಇತ್ಯಾದಿಗಳನ್ನು ಈ ಆವರಣ ಒಳಗೊಳ್ಳಲಿದೆ.