ಕೋಲ್ಕತ್ತಾ: ಇಂದು ದೇಶಾದ್ಯಂತ ಜನರು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ನಡುವೆ ಸಾವಿರಾರು ಭಕ್ತರು ವಾರಣಾಸಿ ಮತ್ತು ಕೋಲ್ಕತ್ತಾದ ಯಾತ್ರಾ ಸ್ಥಳಗಳಲ್ಲಿ ಕಂಡು ಬಂದಿದ್ದಾರೆ. ಉತ್ತರ ಪ್ರದೇಶದ ಪವಿತ್ರ ಕ್ಷೇತ್ರವಾದ ಬನಾರಸ್ನಲ್ಲಿ ಪವಿತ್ರ ಗಂಗಾನದಿಯಲ್ಲಿ ಲಕ್ಷಾಂತರ ಭಕ್ತರು ಮಿಂದೆಳುತ್ತಿದ್ದಾರೆ. ಕೊಲ್ಕತ್ತಾದ ಬಹುಘಾಟ್ನಲ್ಲಿ ನಾಗಾಸಾಧುಗಳು ಕೂಡ ಬೀಡುಬಿಟ್ಟಿದ್ದು, ಗಂಗಾಸಾಗರ್ನಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ.
ವಾರಣಸಿಯಲ್ಲಿ ಭಕ್ತರ ಪವಿತ್ರ ಸ್ನಾನದ ವೇಳೆ ಸುರಕ್ಷತೆಗೆ ಅಗತ್ಯಕ್ರಮ ನಡೆಸಲಾಗಿದ್ದು, ಇದಕ್ಕಾಗಿ ಕುಂಡಗಳನ್ನು ನಿರ್ಮಿಸಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಸ್ಥಳೀಯ ಜನರಿಗೆ ಆರ್ಥಿಕವಾಗಿ ಮಾರಾಟಕ್ಕೆ ಸಹಾಯ ಮಾಡಲು ಹ್ಯಾಡಿಕ್ರಾಫ್ಟ್ನಂತಹ ಹಲವು ಉತ್ಪನ್ನಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಏತನ್ಮಧ್ಯೆ, ಮಕರ ಸಂಕ್ರಾಂತಿಯಂದು ಗಂಗಾಸಾಗರ್ನಲ್ಲಿ ನಡೆಯುವ ವಿಶೇಷ ಮೇಳದಲ್ಲಿ ಭಾಗಿಯಾಗಲು ನಾಗಾಸಾಧುಗಳು ಸಾವಿರಾರು ಕಿಮೀ ಪ್ರಯಾಣ ನಡೆಸಿದ್ದಾರೆ. ನಾಳೆ ಅವರೆಲ್ಲಾ ಗಂಗಾಸಾಗರ್ಗೆ ತೆರಳಿ ಪವಿತ್ರ ಸ್ನಾನ ನಡೆಸಲಿದ್ದಾರೆ. ಈ ಕುರಿತು ಮಾತನಾಡಿರುವ ಮಧ್ಯಪ್ರದೇಶದ ನಾಗಾಸಾಧುವೊಬ್ಬರು, ನಾನು ಡಿಸೆಂಬರ್ 15ರಿಂದ ಇಲ್ಲಿದ್ದು, ಪವಿತ್ರ ಸ್ನಾನ ನಡೆಸಿ ಉಜ್ಜೈನಿಗೆ ಮರಳುವುದಾಗಿ ತಿಳಿಸಿದ್ದಾರೆ. 24 ಪರ್ಗಾಣ ಜಿಲ್ಲೆಯಲ್ಲಿ ನಡೆಯುವ ಗಂಗಾಸಾಗರ್ ಮೇಳದಲ್ಲಿ ಭಾಗಿಯಾಗಲು ಭಕ್ತರಿಗೆ ಬಾಬುಘಾಟ್ನಲ್ಲಿ ಭಕ್ತರಿಗೆ ಕೆಲಕಾಲ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ.
ನಾಗಾಸಾಧುಗಳು ದಂಡು:ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಜಮ್ಮುಗಳಿಂದ ನಾಗಾಸಾಧುಗಳು ಬಂಗಾಳದಲ್ಲಿ ನಡೆಯುವ ಗಂಗಾಸಾಗರ್ ಮೇಳಕ್ಕೆ ಬರಲಿದ್ದಾರೆ. ಈ ಕುರಿತು ಮಾತನಾಡಿರುವ ಜಮ್ಮುವಿನ ನಾಗಾಸಾಧು ಶಿವ ಕೈಲಸ್ ಪುರಿ, ಕಳೆದ 10 ವರ್ಷಗಳಿಂದ ನಾನು ಇಲ್ಲಿಗೆ ಬರುತ್ತಿದ್ದೇನೆ. ನಾಳೆ ಗಂಗಾಸಾಗರ್ನಲ್ಲಿ ಪವಿತ್ರ ಸ್ನಾನ ನಡೆಸುವುದಾಗಿ ತಿಳಿಸಿದ್ದಾರೆ.
ಗಂಗಾಸಾಗರ್ ಭಾರತದ ಸನಾತನ ಧರ್ಮದ ಅತಿದೊಡ್ಡ ಯಾತ್ರಾಸ್ಥಳವಾಗಿದೆ. ಎರಡನೇ ಅತಿದೊಡ್ಡ ಕುಂಭ ಮೇಳ ಇಲ್ಲಿ ನಡೆಯುತ್ತದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಕಟ್ಟು ನಿಟ್ಟಿನ ನಿಯಮವನ್ನು ಮೇಳಕ್ಕೆ ಜಾರಿ ಮಾಡಲಾಗಿತ್ತು. ಈ ಬಾರಿ ಮೇಳಕ್ಕೆ ಅಂದಾಜು 30 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಇದಕ್ಕೆ ಅಗತ್ಯವಾದ ಸಿದ್ಧತೆಯನ್ನು ಸರ್ಕಾರ ನಡೆಸಿದೆ. ಕಾರ್ಯಕ್ರಮದ ಸುರಕ್ಷತೆ ಮತ್ತು ಸುಲಭವಾಗಿ ನಿಭಾಯಿಸುವ ದೃಷ್ಟಿಯಿಂದ 1100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈಗಾಗಲೇ ಪಶ್ಚಿಮ ಬಂಗಾಳ ಸರ್ಕಾರ ಅಗತ್ಯ ಮಾರ್ಗದರ್ಶನವನ್ನು ಜಾರಿ ಮಾಡಿದೆ.