ಭುವನೇಶ್ವರ: ದೇಶದ ವಿವಿಧ ದೇವಾಲಯಗಳಲ್ಲಿ ನಿನ್ನೆ ಮಹಾಶಿವರಾತ್ರಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಭುವನೇಶ್ವರದ ಲಿಂಗರಾಜ ದೇವಸ್ಥಾನದ ಮೇಲೆ ರಾತ್ರಿ 10.20ರ ಸುಮಾರಿಗೆ ಮಹಾದೀಪ ಬೆಳಗಿದ ನಂತರ ಒಡಿಶಾದಲ್ಲಿ ಭಕ್ತರು ಮಹಾ ಶಿವರಾತ್ರಿ ಉಪವಾಸವನ್ನು ಅಂತ್ಯಗೊಳಿಸಿದರು.
ದೇಗುಲದ ಮೇಲಿನ ಮಹಾದೀಪ ಕಣ್ತುಂಬಿಕೊಂಡ ಭಕ್ತರು ವ್ರತವನ್ನು ಕೊನೆಗೊಳಿಸಿದರು. ಕಟ್ಟುನಿಟ್ಟಾದ ಕೋವಿಡ್ ನಿರ್ಬಂಧಗಳ ನಡುವೆ ಒಡಿಶಾದ ಹಲವು ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿ ಆಚರಿಸಲಾಗಿದ್ದು, ನೂರಾರು ಮಂದಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.
ನಿಗದಿಪಡಿಸಿದ ನಿಯಮಗಳ ಪ್ರಕಾರ, ದೇವಾಲಯದ ಸೇವಕರೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಭಕ್ತರು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಿ ದೇವರ ಆಚರಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಇತ್ತ ಪುರಿಯ ಬಾಬಾ ಲೋಕನಾಥ ದೇವಾಲಯ, ಭದ್ರಕ್‌ನ ಆರಾದಿಯಲ್ಲಿರುವ ಅಖಂಡಲಮಣಿ ದೇವಾಲಯ ಹಾಗೂ ಸಂಬಲ್‌ಪುರದ ಶಿವಾಲಯದಲ್ಲಿ ಭಕ್ತರ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕಟಕ್ ಜಿಲ್ಲಾಡಳಿತವು ಮಾ.1ರ ಬೆಳಗ್ಗೆ 5 ರಿಂದ ಇಂದು ಸಂಜೆ 7 ರವರೆಗೆ ಧಬಲೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರು ಸೇರುವುದನ್ನು ತಡೆಯಲು ದೇವಾಲಯದ ಸುತ್ತಲೂ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು.
ಇದನ್ನೂ ಓದಿ:ಮಹಾಶಿವರಾತ್ರಿ: ನಂಜುಂಡೇಶ್ವರನ ದರ್ಶನ ಪಡೆಯಲು ಮುಗಿಬಿದ್ದ ಭಕ್ತಾದಿಗಳು