ಮುಂಬೈ:ರಾಜ್ಯದಲ್ಲಿ ಮರಾಠಿಗರ ಮೀಸಲಾತಿ ಪ್ರತಿಭಟನೆಯ ಸ್ವರೂಪವೇ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಿಂಸಚಾರ ಹೊಸ ತಿರುವು ಪಡೆದುಕೊಂಡಿದೆ. ಮರಾಠಾ ಆಂದೋಲನವನ್ನು ನಿಯಂತ್ರಿಸುವಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಸೋತು ಹೋಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಹರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬವಾಂಕುಲೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಅವರ ದೆಹಲಿಯ ನಿವಾಸದಲ್ಲಿ ಇಂದು ಭೇಟಿಯಾಗಿ ಚರ್ಚಿಸಲಿದ್ದಾರೆ.
ಈಗಾಗಲೇ ಮೀಸಲಾತಿ ಪರಿಹಾರಕ್ಕಾಗಿ ಮರಾಠ ಮುಖಂಡರೊಂದಿಗೆ ಸಭೆ, ಸರ್ವಪಕ್ಷ ಸಭೆ, ಸಚಿವ ಸಂಪುಟ ಉಪಸಮಿತಿಯ ವಿಶೇಷ ಸಭೆಗಳನ್ನು ನಡೆಸಲಾಗಿದೆ. ಆದರೆ, ಏನೂ ಪರಿಣಾಮ ಬೀರದೇ ಇರುವುದರಿಂದ ಮರಾಠರು ತಮ್ಮ ಮೀಸಲಾತಿಗಾಗಿ ಹಠ ಹಿಡಿದಿದ್ದಾರೆ. ಹಿಂಸಾಚಾರದಲ್ಲಿ ತೊಡಗಿರುವ ಮರಾಠ ಹೋರಾಟಗಾರರು, ಹಲವೆಡೆ ಬೆಂಕಿ ಹಚ್ಚುವುದು, ಧ್ವಂಸ ಮಾಡುವುದು ಸೇರಿ ರಸ್ತೆ ತಡೆ ಮುಂದುವರಿಸಿದ್ದಾರೆ. ಮುಖ್ಯಮಂತ್ರಿಯಾಗಲಿ, ಗೃಹಸಚಿವರು ಎಷ್ಟೇ ಮನವಿ ಮಾಡಿದರೂ ಇವ್ಯಾರಾರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿದೆ. ಇದೆಲ್ಲವುಗಳಿಂದ ದಿಕ್ಕು ತೋಚದಾಗಿರುವ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅಮಿತ್ ಶಾರನ್ನು ಭೇಟಿಯಾಗುತ್ತಿದ್ದಾರೆ.