ನವದೆಹಲಿ :ಅಫ್ಘನ್ನಲ್ಲಿ ಜನರನ್ನು ರಕ್ಷಿಸುವ ಪ್ರಕ್ರಿಯೆಯನ್ನು ಉಲ್ಲೇಖಿಸಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಈ ಕಾರಣಕ್ಕಾಗಿಯೇ ದೇಶಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ನಮ್ಮ ನೆರೆಯ ದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಅಲ್ಲಿನ ಭಯಾನಕ ಪರಿಸ್ಥಿತಿಯಲ್ಲಿ ಸಿಖ್ ಹಾಗೂ ಹಿಂದೂಗಳು ತೀವ್ರ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ಸಂಕಷ್ಟಗಳನ್ನು ನೋಡಿದಾಗ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದು ಏಕೆ ಅಗತ್ಯ ಎಂಬುದು ಅರ್ಥವಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣವು ಜನತೆಯನ್ನು ಕಂಗಾಲಾಗಿಸಿದೆ. ಜನರು ಜೀವ ಕೈಲಿಯಲ್ಲಿಡಿದು, ತಮ್ಮ ತಾಯ್ನಾಡಿನಿಂದ ಹೊರಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಹಿಂದೂಗಳು ಮತ್ತು ಸಿಖ್‌ಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ಭಾರತ ಮುಂದಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಹೇಳಿರುವ ಅಂಶದಂತೆ ಅಲ್ಪಸಂಖ್ಯಾತರಿಗೆ ನೆಲೆ ಕಲ್ಪಿಸುವುದಾಗಿ ಸರ್ಕಾರ ಹೇಳಿದೆ.
ಇದನ್ನೂ ಓದಿ: ತಾಲಿಬಾನ್ ತೆಕ್ಕೆಗೆ ಅಫ್ಘನ್.. ಕೋಟ್ಯಂತರ ರೂ. ಸಮೇತ ದುಬೈಗೆ ಹಾರಿರುವ ಉಪಾಧ್ಯಕ್ಷ..
ಈ ನಡುವೆ ಅಫ್ಘಾನಿಸ್ತಾನದಿಂದ ಇಂದು ಬೆಳಗ್ಗೆ ವಾಯುಪಡೆ ವಿಮಾನದಲ್ಲಿ 168 ಮಂದಿ ಭಾರತಕ್ಕೆ ಬಂದಿದ್ದಾರೆ. ಇವರಲ್ಲಿ 107 ಮಂದಿ ಭಾರತೀಯರು. ಉಳಿದವರಲ್ಲಿ ಅಫ್ಘಾನಿಸ್ತಾನದ 24 ಸಿಖ್ ಪ್ರಜೆಗಳು ಸೇರಿದ್ದಾರೆ. ಇಬ್ಬರು ಅಫ್ಘನ್ ಸಂಸದರು ಕೂಡ ಭಾರತಕ್ಕೆ ಆಗಮಿಸಿದ್ದಾರೆ.