ನವದೆಹಲಿ:ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆ ದೇಶದ ಪರಿಸ್ಥಿತಿಯು ಭಾರತದಂತಹ ನೆರೆಯ ರಾಷ್ಟ್ರಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಮತ್ತು ಅದಕ್ಕಾಗಿಯೇ ಈ ವಿಚಾರದ ಮೇಲೆ ಗಮನಹರಿಸುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಾಂಘೈ ಸಹಕಾರ ಸಂಘಟನೆ (SCO-Shanghai Cooperation Organization ) ಮತ್ತು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (CSTO- Collective Security Treaty Organization) ನಡುವಿನ ಸಭೆಯ ನಿಮಿತ್ತ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮುಂಬರುವ ಸರ್ಕಾರದಲ್ಲಿ ಎಲ್ಲ ಸಮಾಜಗಳ ವರ್ಗಗಳ ಪ್ರಾತಿನಿಧ್ಯ ಮುಖ್ಯ ಎಂದು ಮೋದಿ ಪ್ರತಿಪಾದಿಸಿದ್ದಾರೆ. ಇಂತಹ ಹೊಸ ವ್ಯವಸ್ಥೆ ಗುರುತಿಸುವ ಕೆಲಸವನ್ನು ಅಂತಾರಾಷ್ಟ್ರೀಯ ಸರ್ಕಾರ ಮಾಡಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಅಫ್ಘಾನಿಸ್ತಾನದ ವಿಚಾರವಾಗಿ ವಿಶ್ವಸಂಸ್ಥೆಯ ಪಾತ್ರ ಬೆಂಬಲಿಸಿದ ಮೋದಿ, ಆ ದೇಶದಲ್ಲಿ ಅಸ್ಥಿರತೆ ಮತ್ತು ಮೂಲಭೂತವಾದ ಮುಂದುವರೆದರೆ ಅದು, ವಿಶ್ವದಾದ್ಯಂತ ಭಯೋತ್ಪಾದಕ ಸಿದ್ಧಾಂತಗಳನ್ನು ಮತ್ತು ಸಂಘಟನೆಗಳ ಹುಟ್ಟಿಗೆ ಕಾರಣವಾಗುತ್ತದೆ. ಬೇರೆ ದೇಶಗಳೂ ಭಯೋತ್ಪಾದನೆ ಮೂಲಕ ಅಧಿಕಾರಕ್ಕೆ ಬರಲು ಪ್ರೇರಣೆ ನೀಡುತ್ತವೆ ಎಂದಿದ್ದಾರೆ.