ಕರ್ನಾಟಕ

karnataka

SARS-CoV-2 ಮತ್ತು HIV ವಿರುದ್ಧ ಪರಿಣಾಮಕಾರಿ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಐಐಎಸ್​

By

Published : Nov 10, 2020, 4:14 PM IST

ರಾಘವನ್ ವರದರಾಜನ್ ನೇತೃತ್ವದ ಸಂಶೋಧಕರು SARS-CoV-2 ಮತ್ತು HIV ವೈರಸ್‌ಗಳ ವಿರುದ್ಧ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸುತ್ತಿದ್ದು, ಈ ಅಧ್ಯಯನಗಳನ್ನು ಜರ್ನಲ್ ಆಫ್ ಬಯೋಲಾಜಿಕಲ್ ಕೆಮಿಸ್ಟ್ರಿ ಮತ್ತು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್​ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟಿಸಲಾಗಿದೆ.

SARS-CoV-2 and HIV
SARS-CoV-2 and HIV

ಹೈದರಾಬಾದ್:ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್​ನ (ಐಐಎಸ್​ಸಿ) ಮಾಲಿಕ್ಯುಲರ್ ಬಯೋಫಿಸಿಕ್ಸ್ ಘಟಕದ ಪ್ರಾಧ್ಯಾಪಕ ರಾಘವನ್ ವರದರಾಜನ್ ನೇತೃತ್ವದ ಸಂಶೋಧಕರು SARS-CoV-2 ಮತ್ತು HIV ಈ ಎರಡು ವೈರಸ್‌ಗಳ ವಿರುದ್ಧ ಪರಿಣಾಮಕಾರಿ ಲಸಿಕೆ ತಂತ್ರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಳೆದ ವಾರ ಪ್ರಕಟವಾದ ಎರಡು ಅಧ್ಯಯನಗಳಲ್ಲಿ, ಅವರು "ಹೀಟ್ ಟೋಲರೆಂಟ್" ಕೋವಿಡ್-19 ಲಸಿಕೆ ಹಾಗೂ ಪ್ರತಿಕಾಯಗಳಿಂದ ಗುರಿಯಾಗುವ ಎಚ್‌ಐವಿಯ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸುವ ತ್ವರಿತ ವಿಧಾದ ಕುರಿತು ವರದಿ ಮಾಡಿದ್ದು, ಇದು ಪರಿಣಾಮಕಾರಿಯಾಗಿ ಲಸಿಕೆ ವಿನ್ಯಾಸಕ್ಕೆ ಸಹಾಯ ಮಾಡಲಿದೆ. ಈ ಅಧ್ಯಯನಗಳನ್ನು ಜರ್ನಲ್ ಆಫ್ ಬಯೋಲಾಜಿಕಲ್ ಕೆಮಿಸ್ಟ್ರಿ ಮತ್ತು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್​ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟಿಸಲಾಗಿದೆ.

ಕೋವಿಡ್-19 ಲಸಿಕೆ ಪ್ರಯೋಗ:

ಕೋವಿಡ್-19 ಲಸಿಕೆಯು ಕೊರೊನಾ ವೈರಸ್​ನ ಸ್ಪೈಕ್ ಪ್ರೋಟೀನ್‌ನ ಒಂದು ಭಾಗವನ್ನು ಹೊಂದಿದ್ದು, ಇದನ್ನು ರಿಸೆಪ್ಟರ್ ಬೈಂಡಿಂಗ್ ಡೊಮೇನ್ (RBD) ಎಂದು ಕರೆಯಲಾಗುತ್ತದೆ. ಇದು ವೈರಸ್​ನ ಕೋಶಕ್ಕೆ ಅಂಟಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ವರದರಾಜನ್ ಅವರ ಲ್ಯಾಬ್ ಮೈನ್ವಾಕ್ಸ್ ಎಂಬ ಸ್ಟಾರ್ಟ್ಅಪ್​ನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸುತ್ತಿದೆ. ಇದಕ್ಕೆ ಹಲವಾರು ಇತರ ಸಂಸ್ಥೆಗಳು ಕೂಡಾ ಸಹಕರಿಸುತ್ತಿವೆ. ಗಿನಿಯಾ ಹಂದಿಯ ಮೇಲೆ ಲಸಿಕೆಯನ್ನು ಪರೀಕ್ಷಿಸಿದಾಗ, ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸಿತು.

ಈ ಲಸಿಕೆ 37°C ತಾಪಮಾನದಲ್ಲಿ ಒಂದು ತಿಂಗಳು ಸ್ಥಿರವಾಗಿ ಉಳಿಯಿತು. ಫ್ರೀಜ್​ಗೊಳಿಸಿ ಒಣಗೊಳಿಸಿದ ಆವೃತ್ತಿಗಳು 100°C ಗಿಂತ ಹೆಚ್ಚಿನ ತಾಪಮಾನವನ್ನು ಸಹಿಸಿಕೊಳ್ಳಬಲ್ಲವು. ಸಾಮೂಹಿಕ ವ್ಯಾಕ್ಸಿನೇಷನ್​ಗಾಗಿ ಅಂತಹ ಲಸಿಕೆಗಳನ್ನು ದುಬಾರಿ ಕೂಲಿಂಗ್ ಉಪಕರಣಗಳಿಲ್ಲದೆ ಸಂಗ್ರಹಿಸಿಡಬಹುದು ಮತ್ತು ದೂರ ಪ್ರದೇಶಗಳಿಗೆ ಸಾಗಿಸಬಹುದು. ಹೆಚ್ಚಿನ ಲಸಿಕೆಗಳನ್ನು ಅವುಗಳ ಸಾಮರ್ಥ್ಯವನ್ನು ಕಳೆದುಕೊಳ್ಳದಂತೆ 2-8°C ಅಥವಾ ಅದಕ್ಕಿಂತಲೂ ತಂಪಾದ ತಾಪಮಾನದ ನಡುವೆ ಸಂಗ್ರಹಿಸಬೇಕಾಗುತ್ತದೆ. ಎಂಆರ್‌ಎನ್‌ಎ ಲಸಿಕೆಗಳಂತಹ ಹೊಸ ಪ್ರಕಾರಗಳಿಗೆ ಹೋಲಿಸಿದರೆ, ಈ ರೀತಿಯ ಪ್ರೋಟೀನ್ ಆಧಾರಿತ ಲಸಿಕೆಯನ್ನು ಭಾರತದಲ್ಲಿ ಸುಲಭವಾಗಿ ತಯಾರಿಸಬಹುದು. ಯಾಕೆಂದರೆ ಇಲ್ಲಿನ ತಯಾರಕರು ದಶಕಗಳಿಂದ ಇದೇ ರೀತಿಯ ಲಸಿಕೆಗಳನ್ನು ತಯಾರಿಸುತ್ತಿದ್ದಾರೆ.

ವರದರಾಜನ್ ಅವರ ತಂಡವು ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮತ್ತು ಇತರ ಅನೇಕ ಕೋವಿಡ್-19 ಲಸಿಕೆಗಳ ನಡುವೆ ಮತ್ತೊಂದು ವ್ಯತ್ಯಾಸವಿದೆ. ಇದು ಸಂಪೂರ್ಣ ಸ್ಪೈಕ್ ಪ್ರೋಟೀನ್‌ಗೆ ಬದಲಾಗಿ 200 ಅಮೈನೋ ಆಮ್ಲಗಳ ಸ್ಟ್ರಿಂಗ್‌ನ ಆರ್​ಬಿಡಿಯ ನಿರ್ದಿಷ್ಟ ಭಾಗವನ್ನು ಮಾತ್ರ ಬಳಸುತ್ತದೆ. ತಂಡವು ಈ ಭಾಗಕ್ಕೆ ಕೋಡಿಂಗ್ ಮಾಡುವ ಜೀನ್‌ಗಳನ್ನು ಪ್ಲಾಸ್ಮಿಡ್ ಎಂಬ ವಾಹಕ ಡಿಎನ್‌ಎ ಅಣುವಿನ ಮೂಲಕ ಸಸ್ತನಿ ಕೋಶಗಳಲ್ಲಿ ಸೇರಿಸಿತು. ನಂತರ ಅದು ಆರ್‌ಬಿಡಿ ವಿಭಾಗದ ಪ್ರತಿಗಳನ್ನು ಹೊರಹಾಕಿತು. ಗಿನಿಯಾ ಹಂದಿಗಳಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸುವಲ್ಲಿ ಆರ್​ಬಿಡಿ ಸೂತ್ರೀಕರಣವು ಪೂರ್ಣ ಸ್ಪೈಕ್ ಪ್ರೋಟೀನ್‌ನಷ್ಟೇ ಉತ್ತಮವಾಗಿದೆ ಎಂದು ಅವರು ಕಂಡುಕೊಂಡರು.

"ಇದನ್ನು ನಾವು ಕ್ಲಿನಿಕಲ್ ಅಭಿವೃದ್ಧಿಗೆ ಮುಂದುವರಿಸಲು ನಿಧಿ ಸಂಗ್ರಹಿಸಬೇಕಾಗಿದೆ" ಎಂದು ವರದರಾಜನ್ ಹೇಳುತ್ತಾರೆ. ಮಾನವರಲ್ಲಿ ಪರೀಕ್ಷಿಸುವ ಮೊದಲು ಇಲಿಗಳ ಮೇಲೆಯೂ ಪ್ರಯೋಗಿಸಲಾಗುತ್ತದೆ. "ಈ ಅಧ್ಯಯನವನ್ನು ಮುಂದೆ ತೆಗೆದುಕೊಂಡು ಹೋಗಲು ಸರ್ಕಾರ ನಮಗೆ 10 ಕೋಟಿ ರೂ. ಧನ ಸಹಾಯ ನೀಡುವ ಅಗತ್ಯವಿದೆ." ಎಂದು ವರದರಾಜನ್ ತಿಳಿಸಿದ್ದಾರೆ.

ಲಸಿಕೆ ಅಭಿವೃದ್ಧಿ

ಎಚ್ಐವಿ ಲಸಿಕೆ ಪ್ರಯೋಗ:

ಎರಡನೇ ಅಧ್ಯಯನವು ಎಚ್ಐವಿ, ಏಡ್ಸ್​ಗೆ ಕಾರಣವಾಗುವ ವೈರಸನ್ನು ಕೇಂದ್ರೀಕರಿಸಿದೆ. ಈ ರೋಗಕ್ಕೆ ಲಸಿಕೆ ಕಂಡುಹಿಡಿಯಲು ದಶಕಗಳಿಂದ ಸಂಶೋಧನೆ ನಡೆಯುತ್ತಿದೆಯೇ ಹೊರತು, ಲಸಿಕೆ ಇಲ್ಲ. ಅನೇಕ ಸಂಸ್ಥೆಗಳ ಸಂಶೋಧಕರನ್ನು ಒಳಗೊಂಡ ಈ ತಂಡವು ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಮೂಲಕ ಎಚ್‌ಐವಿ ಹೊದಿಕೆ ಪ್ರೋಟೀನ್‌ನ ಯಾವ ಭಾಗಗಳನ್ನು ಗುರಿಯಾಗಿಸುತ್ತದೆ ಎಂಬುದನ್ನು ಗುರುತಿಸಲು ಪ್ರಯತ್ನಿಸಿತು. ಈ ಪ್ರದೇಶಗಳನ್ನು ಆಧರಿಸಿದ ಲಸಿಕೆಗಳು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಅಂತಹ ಪ್ರದೇಶಗಳನ್ನು ಪತ್ತೆ ಮಾಡಲು ಸಂಶೋಧಕರು ಎಕ್ಸರೆ ಸ್ಫಟಿಕಶಾಸ್ತ್ರ ಮತ್ತು ಕ್ರಯೋ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯಂತಹ ವಿಧಾನಗಳನ್ನು ಬಳಸುತ್ತಾರೆ. ಆದರೆ ಇವು ಬಹಳ ಸಮಯ ತೆಗೆದುಕೊಳ್ಳುತ್ತದೆ, ಸಂಕೀರ್ಣವಾಗಿದೆ ಮತ್ತು ದುಬಾರಿಯಾಗಿದೆ. ಆದ್ದರಿಂದ ವರದರಾಜನ್ ಮತ್ತು ಅವರ ತಂಡವು ಪರ್ಯಾಯ ವಿಧಾನಗಳನ್ನು ಅನ್ವೇಷಿಸಿತು ಮತ್ತು ಅಂತಿಮವಾಗಿ ಸರಳವಾದ ಆದರೆ ಪರಿಣಾಮಕಾರಿಯಾದ ಪರಿಹಾರವನ್ನು ತಲುಪಿತು.

ಮೊದಲಿಗೆ ಅವರು ವೈರಸನ್ನು ರೂಪಾಂತರಿಸಿದ್ದಾರೆ. ಇದರಿಂದಾಗಿ ಸಿಸ್ಟೀನ್ ಎಂಬ ಅಮೈನೊ ಆಮ್ಲವು ಪ್ರೋಟೀನ್‌ನಲ್ಲಿ ಹಲವಾರು ಸ್ಥಳಗಳಲ್ಲಿ ಪಾಪ್ ಅಪ್ ಆಗುತ್ತದೆ. ನಂತರ ಅವರು ಈ ಸಿಸ್ಟೀನ್ ಅಣುಗಳಿಗೆ ಅಂಟಿಕೊಳ್ಳುವ ರಾಸಾಯನಿಕ ಲೇಬಲನ್ನು ಸೇರಿಸಿ ಅಂತಿಮವಾಗಿ ವೈರಸನ್ನು ತಟಸ್ಥಗೊಳಿಸುವ ಪ್ರತಿಕಾಯಗಳೊಂದಿಗೆ ಚಿಕಿತ್ಸೆ ನೀಡಿದರು. ಸಿಸ್ಟೀನ್ ಲೇಬಲ್‌ನಿಂದ ನಿರ್ಬಂಧಿಸಲ್ಪಟ್ಟ ಕಾರಣ ಪ್ರತಿಕಾಯಗಳು ವೈರಸ್‌ನ ನಿರ್ಣಾಯಕ ತಾಣಗಳಿಗೆ ಬಂಧಿಸಲು ಸಾಧ್ಯವಾಗದಿದ್ದರೆ, ವೈರಸ್ ಬದುಕುಳಿಯಬಹುದು ಮತ್ತು ಸೋಂಕಿಗೆ ಕಾರಣವಾಗಬಹುದು. ಉಳಿದಿರುವ ರೂಪಾಂತರಿತ ವೈರಸ್‌ಗಳ ಜೀನ್‌ಗಳನ್ನು ಅನುಕ್ರಮಗೊಳಿಸುವ ಮೂಲಕ ಆ ಸೈಟ್‌ಗಳನ್ನು ಗುರುತಿಸಲಾಯಿತು.

"ಇದು ಪ್ರತಿಕಾಯಗಳು ಎಲ್ಲಿ ಬಂಧಿಸಲ್ಪಟ್ಟಿವೆ ಮತ್ತು ಲಸಿಕೆ ವಿನ್ಯಾಸಕ್ಕೆ ಉಪಯುಕ್ತವಾಗಿದೆ ಎಂಬುದನ್ನು ಕಂಡುಹಿಡಿಯುವ ತ್ವರಿತ ಮಾರ್ಗವಾಗಿದೆ" ಎಂದು ವರದರಾಜನ್ ಹೇಳುತ್ತಾರೆ. ವಿಭಿನ್ನ ಜನರ ಸೆರಾ ಮಾದರಿಗಳು ಪ್ರತಿಕಾಯಗಳನ್ನು ಹೊಂದಿರುವ ರಕ್ತದ ಭಾಗಗಳು, ಒಂದೇ ಲಸಿಕೆ ಅಥವಾ ವೈರಸ್‌ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಏಕಕಾಲದಲ್ಲಿ ಪರೀಕ್ಷಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ABOUT THE AUTHOR

...view details