ಹೈದರಾಬಾದ್(ತೆಲಂಗಾಣ) :ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಹೈದರಾಬಾದ್) ಮೊಬೈಲ್ ಸಹಾಯದಿಂದ ಗಂಟಲು ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವ ಆ್ಯಪ್ವೊಂದನ್ನು ಅಭಿವೃದ್ಧಿಪಡಿಸಿದೆ.
ಗ್ರೇಸ್ ಕ್ಯಾನ್ಸರ್ ಫೌಂಡೇಶನ್ ಮತ್ತು ಬಯೋಕಾನ್ ಬಯೋಫಾರ್ಮಾಸಿಟಿಕಲ್ ಕಂಪನಿಯ ಸಹಯೋಗದೊಂದಿಗೆ ಹಾಗೂ IHub-Data ಸಹಾಯದಿಂದ ಐಐಟಿ ಹೈದರಾಬಾದ್‌ನಲ್ಲಿರುವ ಸಂಶೋಧನಾ ತಂಡವು IIITH- HCP ಹೆಸರಿನ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.
ಈ ಹಿಂದಿನ ಗಂಟಲಿನ ಕ್ಯಾನ್ಸರ್ ರೋಗನಿರ್ಣಯದ ಚಿತ್ರಗಳು ಹಾಗೂ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಿಕೊಂಡು ವ್ಯಕ್ತಿಯ ಗಂಟಲನ್ನು ವಿಶ್ಲೇಷಿಸುವ ಮೂಲಕ ಈ ಆ್ಯಪ್ ಕ್ಯಾನ್ಸರ್ ಅನ್ನು ಪತ್ತೆ ಮಾಡುತ್ತದೆ.
ಗಂಟಲು, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆಗಳನ್ನು ನಡೆಸಲು ಹಳ್ಳಿಹಳ್ಳಿಗಳಲ್ಲಿ ಗ್ರೇಸ್ ಕ್ಯಾನ್ಸರ್ ಫೌಂಡೇಶನ್ ವತಿಯಿಂದ ಸ್ಕ್ರೀನಿಂಗ್ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.
ಆದರೆ, ಗ್ರಂಥಿಶಾಸ್ತ್ರಜ್ಞರ ಕೊರತೆಯಿಂದಾಗಿ ಎಲ್ಲ ಜನರನ್ನು ಪರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಐಐಟಿ-ಹೈದರಾಬಾದ್‌ನ ಈ ಅಪ್ಲಿಕೇಶನ್ ಜನರಿಗೆ ಹೆಚ್ಚು ಸಹಾಯಕಾರಿಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಟಗರು ಸಿನಿಮಾ ನಟಿಯಿಂದ ಕೂದಲು ದಾನ.. ಕ್ಯಾನ್ಸರ್ ರೋಗಿಗಳ ಮೊಗದಲ್ಲಿ ಮಂದಹಾಸ
ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ ವಿನೋದ್ ಪಿಕೆ ಮಾತನಾಡಿ, IIITH- HCP ಆ್ಯಪ್ ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ ಮತ್ತು ಅಪ್ಲಿಕೇಶನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗಂಟಲು ಕ್ಯಾನ್ಸರ್ ಮಾತ್ರವಲ್ಲದೆ ಇತರ ರೀತಿಯ ಕ್ಯಾನ್ಸರ್ ರೋಗನಿರ್ಣಯವನ್ನು ಕಂಡುಹಿಡಿಯಲು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದ್ದಾರೆ.