ನವದೆಹಲಿ: ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ತನ್ನ ಗೆಳತಿಯನ್ನು ಕೊಂದು ದೇಹವನ್ನು 35 ತುಂಡರಿಸಿದ ದುರುಳ ಅಫ್ತಾಬ್ ಪೂನಾವಾಲಾನ ಬಗ್ಗೆ ಆಘಾತಕಾರಿ ಸಂಗತಿಗಳು ಬಹಿರಂಗವಾಗುತ್ತಿವೆ.
ಮಾಹಿತಿ ಪ್ರಕಾರ, ಪೊಲೀಸರಿಗೆ ಇನ್ನೂ ಶ್ರದ್ಧಾ ತಲೆ ಸಿಕ್ಕಿಲ್ಲ. ಹೀಗಾಗಿ ಹುಡುಕಾಟ ಮುಂದುವರಿದಿದೆ. ಪೊಲೀಸರು ಅಫ್ತಾಬ್‌ನೊಂದಿಗೆ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದು, ಮೃತದೇಹದ ಸಂಪೂರ್ಣ ಭಾಗಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಹಂತಕ ಹಾಗೂ ಪ್ರಕರಣದ ಬಗೆಗಿನ ಕೆಲ ಭಯಾನಕ ವಿಷಯಗಳು ಬಯಲಾಗಿವೆ.
'ಗೂಗಲ್, ಯೂಟ್ಯೂಬ್ ಸಹಾಯ ತೆಗೆದುಕೊಂಡೆ': ಜೀವನ ಪೂರ್ತಿ ಸಂಗಾತಿಯಾಗಿ ಸುಖ ಜೀವನ ನಡೆಸಲು ಪೋಷಕರಿಂದ ಜಗಳವಾಡಿಕೊಂಡು ಮನೆ ಬಿಟ್ಟು ಬಂದಿದ್ದ ಗೆಳತಿ ಶ್ರದ್ಧಾಳನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಅಫ್ತಾಬ್ ಕೊಂದು ಹಾಕಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ವಿಚಾರವನ್ನು ಸ್ವತ: ಆತನೇ ಒಪ್ಪಿಕೊಂಡಿದ್ದಾನೆ. ಮಾನವ ದೇಹದ ರಚನೆ ಹೇಗಿದೆ ಎಂಬುದನ್ನು ಗೂಗಲ್, ಯೂಟ್ಯೂಬ್ನಲ್ಲಿ ತಿಳಿದುಕೊಂಡನಂತೆ. ಇದಾದ ನಂತರ ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿರುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲ, ಮೃತದೇಹದ ದುರ್ವಾಸನೆ ಹೊರ ಹೋಗದಂತೆ ಅಗರಬತ್ತಿಯ ಸೆಟ್ಟು ಇಟ್ಟುಕೊಂಡಿದ್ದ. ರಾತ್ರಿ 12 ರಿಂದ 1ರ ನಡುವೆ ತನ್ನ ಕೊಠಡಿಯಿಂದ ಮೆಹ್ರೌಲಿ ಅರಣ್ಯಕ್ಕೆ ಮೃತದೇಹದ ತುಂಡುಗಳನ್ನು ತೆಗೆದುಕೊಂಡು ಹೋಗಿ ಎಸೆದು ಬರುತ್ತಿದ್ದನಂತೆ. ಪಾಲಿಕೆಯ ಕಸ ಸಂಗ್ರಹ ವ್ಯಾನ್‌ನಲ್ಲಿ ಶ್ರದ್ಧಾ ಮತ್ತು ಅವನ ರಕ್ತಸಿಕ್ತ ಬಟ್ಟೆಗಳನ್ನು ಹಾಕಿದ್ದಾನೆ.
ಡಿಎನ್‌ಎ ಮಾದರಿ ಮರೆಮಾಚಲು ಪ್ಲಾನ್:ಮೇ 18ಕ್ಕೆ ಶ್ರದ್ಧಾಳ ಕೊಲೆಗೈದು ಬಾತ್ ರೂಮ್ನಲ್ಲಿ ಡೆಡ್ ಬಾಡಿ ಇಟ್ಟಿದ್ದಾನೆ. ಮೇ 19ರಂದೇ ಹೋಗಿ ಕ್ರೆಡಿಟ್ ಕಾರ್ಡ್ ಮೂಲಕ 22 ಸಾವಿರ ರೂಪಾಯಿ ಕೊಟ್ಟು ಡಬಲ್ ಡೋರ್ ಫ್ರಿಡ್ಜ್ ಖರೀದಿಸಿದ್ದ. ಬಳಿಕ ಅಲ್ಲೇ ಎದುರುಗಡೆ ಇದ್ದ ಅಂಗಡಿಯಲ್ಲಿ ಹರಿತವಾದ ಚಾಕು ಖರೀದಿಸಿದ್ದ. ಶವವನ್ನು ತುಂಡರಿಸಿದ ಬಳಿಕ ಸಲ್ಫ್ಯೂರಿಕ್ ಹೈಡ್ರೋಕ್ಲೋರಿಕ್ ಆಮ್ಲ ಬಳಸಿ ನೆಲ ತೊಳೆಯುತ್ತಿದ್ದ. ಫೊರೆನ್ಸಿಕ್ ತನಿಖೆಯ ಸಮಯದಲ್ಲಿ DNA ಮಾದರಿಗಳು ಕಂಡುಬರದಂತೆ ದುರುಳ ಈ ಯೋಜನೆ ರೂಪಿಸಿದ್ದ.
ಇದನ್ನೂ ಓದಿ:ಲವ್ ಜಿಹಾದ್ ಆಯಾಮದಲ್ಲಿ ತನಿಖೆ.. ಅಫ್ತಾಬ್ನನ್ನು ಮರಣ ದಂಡನೆಗೆ ಗುರಿಪಡಿಸುವಂತೆ ಶ್ರದ್ಧಾ ತಂದೆ ಆಗ್ರಹ
ಬೇರೆ ಯುವತಿಯರ ಕರೆತಂದು ಸೆಕ್ಸ್: ಈ ಘಟನೆ ನಡೆದು 20-25 ದಿನಗಳ ನಂತರ ಡೇಟಿಂಗ್ ಆ್ಯಪ್ ಮೂಲಕ ಮತ್ತೊಬ್ಬ ಯುವತಿಯನ್ನು ಭೇಟಿಯಾಗುತ್ತಿದ್ದ ಅಫ್ತಾಬ್, ತನ್ನ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಬಂದು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ. ಆರೋಪಿ ತಾನು ವಾಸವಿದ್ದ ಕೊಠಡಿಗೆ ಪ್ರತಿ ತಿಂಗಳು 10 ಸಾವಿರ ರೂ. ಬಾಡಿಗೆ ನೀಡುತ್ತಿದ್ದ ಎಂಬ ವಿಚಾರಗಳನ್ನು ಪೊಲೀಸ್ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ.
'ಮದುವೆ ಆಗುವಂತೆ ಒತ್ತಾಯಿಸಿದ್ದಕ್ಕೆ ಕೊಂದೆ: 'ನನಗೂ ಶ್ರದ್ಧಾಗೂ ತಿಂಗಳಾನುಗಟ್ಟಲೆ ಜಗಳ ಆಗ್ತಿತ್ತು. ಮದುವೆಯಾಗು ಎಂದು ಆಕೆ ಪೀಡಿಸುತ್ತಿದ್ದಳು. ನಾನು ಬೇರೆ ಹುಡುಗಿಯರ ಜೊತೆ ಮಾತಾಡೋದು ಆಕೆಗೆ ಇಷ್ಟ ಇರದೇ ಜಗಳ ಮಾಡ್ತಿದ್ಳು. ಇದಕ್ಕಾಗಿ ಕೋಪಗೊಳ್ಳುತ್ತಿದ್ದಳು. ಇದೇ ಕಾರಣಕ್ಕೆ ನಾನು ಅವಳನ್ನು ಕೊಂದಿದ್ದೇನೆ ಎಂದು ಅಫ್ತಾಬ್ ತಪ್ಪು ಒಪ್ಪಿಕೊಂಡಿದ್ದಾನೆ. ಘಟನೆಯ ನಂತರ ಈತ ಹಿಮಾಚಲದ ಬದ್ರಿ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದು, ಇಬ್ಬರೂ ಛತ್ತರ್‌ಪುರದಲ್ಲಿ ವಾಸಿಸಲು ಪ್ರಾರಂಭಿಸಿದರು ಎಂದು ತಿಳಿದುಬಂದಿದೆ.