ಕೋಲ್ಕತ್ತಾ:ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆದು 19 ಜನರು ಸಾವಿಗೀಡಾಗಿದ್ದಾರೆ. ಇದು ಭದ್ರತಾ ವೈಫಲ್ಯ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ತಾವು ಕೇಳಿದಾಗ್ಯೂ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಬಿಎಸ್‌ಎಫ್‌ನ ಡಿಐಜಿ ಎಸ್.ಎಸ್. ಗುಲೇರಿಯಾ ಅವರು, ಚುನಾವಣಾ ಆಯೋಗವು ಜುಲೈ 7ರಂದು ಅತಿ ಸೂಕ್ಷ್ಮ ಬೂತ್ಗಳ ಒಂದು ಪಟ್ಟಿಯನ್ನು ಮಾತ್ರ ನೀಡಿದೆ. ಅದರಲ್ಲಿ ಬೂತ್ಗಳ ಸಂಖ್ಯೆಗಳನ್ನು ನೀಡಿದೆ. ಯಾವ ಪ್ರದೇಶ, ಸೂಕ್ಷ್ಮತೆ ಬಗ್ಗೆ ಯಾವ ವಿವರ ನೀಡಿಲ್ಲ. ಈ ಬಗ್ಗೆ ನಾವು ಹಲವು ಪತ್ರಗಳನ್ನು ಬರೆದಿದ್ದೇವೆ. ಅದಕ್ಕೆ ಉತ್ತರವಾಗಿ ಒಂದು ಪತ್ರ ಮಾತ್ರ ಬಂದಿದೆ ಎಂದು ಅವರು ದೂರಿದರು.
ಆಯಾ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 4834 ಸೂಕ್ಷ್ಮ ಬೂತ್‌ಗಳಲ್ಲಿ ಸಿಎಪಿಎಫ್ ಪಡೆಯನ್ನು ನಿಯೋಜಿಸಲಾಗಿದೆ. ಆದರೆ, ಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ ಇದಕ್ಕಿಂತಲೂ ಹೆಚ್ಚಾಗಿದೆ. ಈ ಬಗ್ಗೆ ಆಯೋಗ ನಮಗೆ ತಿಳಿಸಿಲ್ಲ. ರಾಜ್ಯದ 25 ಪೊಲೀಸ್ ಪಡೆಗಳಳ್ಲದೇ, 59,000 ಕೇಂದ್ರೀಯ ಸಶಸ್ತ್ರ ಪೊಲೀಸರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆದರೆ, ಸೂಕ್ಷ್ಮ ಬೂತ್‌ಗಳಲ್ಲಿ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.