ನವದೆಹಲಿ :ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೋವಿಡ್-19 ಸಾಂಕ್ರಾಮಿಕವು ರಾಷ್ಟ್ರೀಯ ಸವಾಲಾಗಿದೆ. ಈ ವಿಚಾರದಲ್ಲಿ ರಕ್ಷಣಾತ್ಮಕವಾಗಿರಬೇಕು ಎಂದಿದ್ದಾರೆ.
ಕೊರೊನಾ ವಿಚಾರವಾಗಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸೋನಿಯಾ ಗಾಂಧಿ ಮಾತನಾಡಿದ್ರು. ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ಪಕ್ಷಗಳ ರಾಜಕೀಯಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಸವಾಲು ಎಂದು ಕಾಂಗ್ರೆಸ್ ನಂಬಿದೆ.
ಹೀಗಾಗಿ, 2020ರ ಫೆಬ್ರವರಿ-ಮಾರ್ಚ್‌ನಿಂದ ನಾವು ಕೊರೊನಾ ಮಾಹಾಮಾರಿ ನಿಯಂತ್ರಿಸುವಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದ್ದೇವೆ ಎಂದ್ರು. ಆದಾಗ್ಯೂ, ಕೋವಿಡ್-19 ಎರಡನೇ ಅಲೆ ಮತ್ತೆ ದೇಶವನ್ನು ಅಲುಗಾಡಿಸುತ್ತಿರುವುದು ವಿಷಾದನೀಯ ಎಂದ್ರು.
ಈ ಸಾಂಕ್ರಾಮಿಕದಿಂದ ಕುಟುಂಬಗಳು ಕಂಗಾಲಾಗಿವೆ. ಜೀವನೋಪಾಯಗಳು ಕಳೆದು ಹೋಗಿವೆ ಎಂದ್ರು. ವೈದ್ಯಕೀಯ ಉಪಕರಣಗಳು ಮತ್ತು ಆಸ್ಪತ್ರೆಯಲ್ಲಿ ಹಾಸಿಗೆಗಳ ತೀವ್ರ ಕೊರತೆಯ ಸುದ್ದಿ ವರದಿಗಳನ್ನು ಓದಲು ಬಹಳ ಕಷ್ಟವಾಗುತ್ತಿದೆ.
ದೇಶಾದ್ಯಂತ ಕೋವಿಡ್-19 ಲಸಿಕೆಯ ಕೊರತೆಯ ಬಗ್ಗೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ರೆಮ್ಡೆಸಿವಿರ್ ಸೇರಿ ಪ್ರಮುಖ ಜೀವ ಉಳಿಸುವ ಔಷಧಿಗಳ ಬಗ್ಗೆಯೇ ಚರ್ಚೆಯಾಗುತ್ತಿದೆ ಎಂದು ಸೋನಿಯಾ ಹೇಳಿದ್ರು. ಸೋನಿಯಾ ಗಾಂಧಿ ಕಳೆದ ವರ್ಷದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಸಾವಿರಾರು ಕುಟುಂಬಗಳ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ರು. ಅವರ ನೋವು ಮತ್ತು ದುಃಖ ನಮ್ಮ ನೋವು ಮತ್ತು ದುಃಖವಾಗಿದೆ.
ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ಸೇವೆಗೆ ನಮ್ಮ ಕೃತಜ್ಞತೆ ಮತ್ತು ಬೆಂಬಲವಿದೆ ಎಂದು ಪುನರುಚ್ಚರಿಸಿದ್ರು. ಇನ್ನು, ಕೊರೊನಾ ನಿಯಂತ್ರಣ ಸಂಬಂಧ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿರುವುದಾಗಿ ಅವರು ಹೇಳಿದ್ರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಬೆಡ್ಗಳ ಕೊರತೆ ಇದೆ. ಹೀಗಾಗಿ, ಈ ಕೊರತೆ ನೀಗಿಸಲು ಸಂಬಂಧಪಟ್ಟ ಸಚಿವರಿಗೆ ಕಾಲಕಾಲಕ್ಕೆ ಕೊರೊನಾ ಪರಿಹಾರ ಧನ ಬಿಡುಗಡೆ ಮಾಡುವಂತೆ ಮನವಿ ಮಾಡಿರುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ರು.
ಕೊರೊನಾ ಲಸಿಕೆ ವಿದೇಶಗಳಿಗೆ ರಫ್ತು ಮಾಡುತ್ತಿರುವ ಕುರಿತು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಅವರು, ಈಗಾಗಲೇ ವಿದೇಶಗಳಿಗೆ 6.5 ಕೋಟಿ ಕೋವಿಡ್ ವ್ಯಾಕ್ಸಿನ್ ಡೋಸ್ ನೀಡಲಾಗಿದೆ. ಈಗ ನಮ್ಮ ದೇಶದಲ್ಲಿಯೇ ಕೊರೊನಾ ವ್ಯಾಪಿಸುತ್ತಿದೆ. ನಮ್ಮ ದೇಶದಲ್ಲಿಯೇ ಸಾವಿರಾರು ಜನ ಕೊರೊನಾಗೆ ಬಲಿಯಾಗುತ್ತಿರುವಾಗ ಬೇರೆ ದೇಶಗಳಿಗೆ ಲಸಿಕೆ ರಫ್ತು ಮಾಡುವ ಔದಾರ್ಯ ತೋರಬೇಕೆ? ಎಂದು ಪ್ರಶ್ನಿಸಿದ್ದಾರೆ.
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಸ್ಥಿತಿ ನಿಯಂತ್ರಿಸಲು ಭಾಗಶಃ ಕರ್ಫ್ಯೂಗಳು, ಪ್ರಯಾಣದ ನಿರ್ಬಂಧಗಳು, ಲಾಕ್‌ಡೌನ್ ಮೊರೆ ಹೋಗುತ್ತಿವೆ. ಆದರೆ, ಇದು ನಾವು ಮತ್ತೆ ಆರ್ಥಿಕ ಚಟುವಟಿಕೆಯನ್ನು ನಿರ್ಬಂಧಿಸಿದಂತಾಗುತ್ತದೆ.
ಈಗಾಗಲೇ ತೊಂದರೆಗೀಡಾದ ಜನರಿಗೆ, ವಿಶೇಷವಾಗಿ ಬಡವರಿಗೆ ಮತ್ತು ದಿನಗೂಲಿ ನೌಕರರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಆದ್ದರಿಂದ, ಪ್ರತಿ ಅರ್ಹ ನಾಗರಿಕರ ಖಾತೆಗೆ ಮಾಸಿಕ ₹6,000 ರೂ. ಜಮಾ ಮಾಡುವಂತೆ ಸೋನಿಯಾ ಮನವಿ ಮಾಡಿದ್ರು. ''ಈ ಸವಾಲಿನ ಸಮಯವನ್ನು ರಾಜಕೀಯ ವಿರೋಧಿಗಳ ಬದಲು ಭಾರತೀಯರಂತೆ ತೆಗೆದುಕೊಳ್ಳುವುದು ನಿಜವಾದ ರಾಜಧರ್ಮ" ಎಂದು ಸೋನಿಯಾ ಗಾಂಧಿ ಹೇಳಿದರು.