ನವದೆಹಲಿ: ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಇಂದು ನಾಲ್ಕು ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ 167 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಭಾರಿ ಬಹುಮತ ಪಡೆಯುವತ್ತ ದಾಪುಗಾಲು ಹಾಕಿದೆ. ಇಲ್ಲಿ ಕಾಂಗ್ರೆಸ್ 64 ಸ್ಥಾನಗಳಿಗೆ ಕುಸಿತ ಕಂಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 64 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕೆಸಿಆರ್ ನೇತೃತ್ವದ ಬಿಆರ್‌ಎಸ್ 39 ಸ್ಥಾನಗಳಿಗೆ ಇಳಿದಿದೆ.
ಪ್ರಮುಖ ಮೂರು ರಾಜ್ಯಗಳಲ್ಲಿ ಪಕ್ಷಕ್ಕೆ ಹಿನ್ನಡೆ:ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜಂಟಿಯಾಗಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಲ್ಲಿ 150ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳನ್ನು ನಡೆಸಿದರೂ ರಾಜಸ್ಥಾನ ಹಾಗೂ ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಪಕ್ಷ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ನಾಯಕರ ಪ್ರಕಾರ, ಆಗಸ್ಟ್ 22ರಿಂದ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು 42 ಸಾರ್ವಜನಿಕ ಸಭೆಗಳು ಮತ್ತು ಹಲವು ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಕಾಂಗ್ರೆಸ್ನ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ರಾಹುಲ್ ಗಾಂಧಿ ಅವರು ಅಕ್ಟೋಬರ್ 5 ರಿಂದ ಐದು ರಾಜ್ಯಗಳಲ್ಲಿ ಸುಮಾರು 64 ಸಾರ್ವಜನಿಕ ಸಭೆಗಳು, ಪಾದಯಾತ್ರೆಗಳು, ರೋಡ್ ಶೋಗಳು ಮತ್ತು ಜನರೊಂದಿಗೆ ಸಾರ್ವಜನಿಕ ಸಂವಾದಗಳನ್ನು ನಡೆಸಿದ್ದರು. ಅವರ ಸಹೋದರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ 44 ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳನ್ನು ಉದ್ದೇಶಿಸಿ ಮಾತನಾಡಿದ್ದರು.