ಇಂದೋರ್:ಹೊಸ ಸಂಸತ್ ಮೇಲೆ ಪ್ರತಿಷ್ಠಾಪಿಸಲಾಗುವ ಹೊಸ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭವು ಈಗ ವಿವಾದಕ್ಕೀಡಾಗಿದೆ. ಮೂಲ ರಾಷ್ಟ್ರೀಯ ಲಾಂಛನದಂತೆ ಇಲ್ಲ ಎಂಬುದು ವಿಪಕ್ಷಗಳ ಆಕ್ಷೇಪವಾಗಿದೆ. ಆದರೆ, ಇದನ್ನು ಸರ್ಕಾರ ಮತ್ತು ವಾಸ್ತುಶಿಲ್ಪಿ ಅಲ್ಲಗಳೆದಿದ್ದರು. ಇದೀಗ ಲಾಂಛನ ರೂಪಿಸುವ ತಂಡದಲ್ಲಿದ್ದ ಸಹ ಕಲಾವಿದ ದೀನಾನಾಥ್ ಭಾರ್ಗವ್ ಅವರ ಕುಟುಂಬಸ್ಥರು ಕೂಡ ಲಾಂಛನದ ಸ್ವರೂಪವನ್ನು ತಿದ್ದಲಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಭಾರ್ಗವ್ ಅವರ ಪತ್ನಿ, ರಾಷ್ಟ್ರೀಯ ಲಾಂಛನವನ್ನು ರೂಪಿಸುವ ಹೊಣೆಗಾರಿಕೆ ನೀಡಿದ ಬಳಿಕ ದೀನಾನಾಥ್ ಭಾರ್ಗವ್ ಅವರು ಮೂರು ತಿಂಗಳು ಕೋಲ್ಕತ್ತಾದ ಮೃಗಾಲಯಕ್ಕೆ ತೆರಳಿ ಸಿಂಹಗಳ ಗಾಂಭೀರ್ಯವನ್ನು ಕಣ್ಣಾರೆ ಕಂಡು ಚಿತ್ರಿಸಲಾಗಿದೆ. ಸಾರನಾಥದ ಮೂಲ ಅಶೋಕ ಸ್ತಂಭದಂತೆಯೇ ಹೊಸ ಲಾಂಛನವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.