ಆಂಧ್ರಪ್ರದೇಶ: ಆ ಇಬ್ಬರು ಯುವಕರು ಉನ್ನತ ವ್ಯಾಸಂಗ ಮಾಡಿ ಕೈತುಂಬಾ ಆದಾಯ ತಂದುಕೊಡುವ ಉದ್ಯೋಗದಲ್ಲಿದ್ದರು. ಆದರೆ ಅದರಿಂದ ತೃಪ್ತರಾಗಗೆ ಸಣ್ಣ ವ್ಯಾಪಾರವೇ ಉತ್ತಮ ಎಂದುಕೊಂಡರು. ತಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಂಡು ಕೆಲಸ ಮಾಡಲು ಆರಂಭಿಸಿದರು. ಏಳು ವರ್ಷಗಳ ಹಿಂದೆ ಡಿಸೈನ್ ವಾಲ್ಸ್ ಹೆಸರಿನಲ್ಲಿ ಆರಂಭವಾದ ಸ್ಟಾರ್ಟಪ್ ಕಂಪನಿ ದಿನದಿಂದ ದಿನಕ್ಕೆ ಉನ್ನತ ಮಟ್ಟಕ್ಕೆ ಬೆಳೆಯುತ್ತಿದ್ದು ಇದೀಗ 100 ಮಂದಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬಂದಿದೆ.
''ನಾವು ನಿಮ್ಮ ಜಾಗವನ್ನು ಅಲಂಕೃತಗೊಳಿಸುತ್ತೇವೆ'' ಎಂಬ ಘೋಷಣೆಯೊಂದಿಗೆ ಈ ಸ್ಟಾರ್ಟ್ಅಪ್ ಕಂಪನಿ ಮುಂದೆ ಸಾಗುತ್ತಿದೆ. ಕೆಲಸ ಬಿಟ್ಟು ಸ್ವಂತ ಉದ್ಯಮ ಆರಂಭಿಸಿರುವ ಈ ಯುವ ಗೆಳೆಯರ ಯಶಸ್ಸನ್ನು ತಿಳಿಯೋಣ ಬನ್ನಿ.
ಡಿಸೈನ್ ವಾಲ್ಸ್: ಕಾಲ ಬದಲಾದಂತೆ ಯುವಜನತೆಯ ಚಿಂತನೆಯೂ ಬದಲಾಗುತ್ತಿದೆ. ಇಂದಿನ ಪೀಳಿಗೆಯವರು ದೊಡ್ಡ ಉದ್ಯೋಗಗಳಿಗಿಂತ ಸಣ್ಣ ವ್ಯಾಪಾರವೇ ಮೇಲು ಎಂದು ಭಾವಿಸುತ್ತಾರೆ. ಅದಕ್ಕೆ ಈ ಯುವಕರೇ ಸಾಕ್ಷಿ. ಇಬ್ಬರೂ ಕಾಲೇಜು ದಿನಗಳಲ್ಲಿ ಗೆಳೆಯರಾಗಿದ್ದರು. ವಿದ್ಯಾಭ್ಯಾಸ ಮುಗಿಸಿ ಕೆಲವು ವರ್ಷಗಳ ಕಾಲ ಕಾರ್ಪೊರೇಟ್ ಉದ್ಯೋಗಗಳಲ್ಲಿ ದುಡಿದು ಹಣ ಸಂಪಾದಿಸಿದರು. ಆದರೆ ಮೊದಲಿನಿಂದಲೂ ಉದ್ಯಮಿಯಾಗುವ ಯೋಚನೆ ಅವರ ಮನಸ್ಸಿನಲ್ಲಿತ್ತು. 2015ರಲ್ಲಿ, "ಡಿಸೈನ್ ವಾಲ್ಸ್" ಹೆಸರಿನ ಸ್ಟಾರ್ಟ್ಅಪ್ ಅನ್ನು ಸ್ಥಾಪಿಸಲಾಯಿತು. ಆ ಸಂಸ್ಥೆ ಉತ್ತಮ ಯಶಸ್ಸು ಸಾಧಿಸಿತು.
ವಿಚಾರಗಳ ವಿನಿಮಯ-ಸ್ವಂತ ಉದ್ಯಮ: ಆಂಧ್ರಪ್ರದೇಶದ ವಿಮಲ್ ಶ್ರೀಕಾಂತ್ ಮತ್ತು ಅಭಿನವ್ ರೆಡ್ಡಿ ಅವರೇ ಈ ಸಾಧಕರು. ವಾರಂಗಲ್‌ನಲ್ಲಿರುವ ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಇನ್ನೋವೇಟಿವ್ ಟೆಕ್ನಾಲಜಿ, ರಿಸರ್ಚ್- IJITS ನಲ್ಲಿ ತಮ್ಮ ಅಧ್ಯಯನದ ದಿನಗಳಲ್ಲಿ ಸ್ನೇಹಿತರಾದರು. ವರ್ಷಾನುಗಟ್ಟಲೆ ಪ್ರತ್ಯೇಕವಾಗಿ ಕೆಲಸ ಮಾಡಿದ ಯುವಕರು ಸಮಾರಂಭವೊಂದರಲ್ಲಿ ಭೇಟಿಯಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಬಳಿಕ ತಮ್ಮ ಸ್ವಂತ ಉದ್ಯಮ ಸ್ಥಾಪಿಸುವ ದೃಢ ನಿರ್ಧಾರ ತೆಗೆದುಕೊಂಡು ಮುಂದಡಿ ಇಟ್ಟರು.
ವಾಲ್ ಡಿಸೈನ್ ಕ್ಷೇತ್ರ:ಮೊಟ್ಟಮೊದಲ ಬಾರಿಗೆ ವಾಲ್ ಡಿಸೈನ್ ಕ್ಷೇತ್ರಕ್ಕೆ ಕಾಲಿಟ್ಟ ಅಭಿನವ್, ತಮ್ಮ ಕ್ಷೇತ್ರದಲ್ಲಿನ ಅಸಹಕಾರ, ಮಾರ್ಕೆಟಿಂಗ್‌ನಲ್ಲಿ ಎದುರಿಸುತ್ತಿರುವ ಸವಾಲುಗಳು, ಸೇವೆಗಳ ಗುಣಮಟ್ಟದ ಬಗ್ಗೆ ಗೆಳೆಯ ವಿಮಲ್ ಜತೆ ಹಂಚಿಕೊಂಡರು. ಮಾರ್ಕೆಟಿಂಗ್‌ನಲ್ಲಿ ಅನುಭವ ಹೊಂದಿದ್ದ ವಿಮಲ್, ಬಿಸ್ನೆಸ್ ಪಾರ್ಟ್ನರ್ ಆಗುವ ಬಗ್ಗೆ ಅಭಿನವ್ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಇಬ್ಬರೂ ಜೊತೆಯಾದರು. ಅಂದಿನಿಂದ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಾಲ್‌ಪೇಪರ್‌ಗಳನ್ನು (ಗೋಡೆಯ ಅಲಂಕಾರ) ನೀಡುತ್ತಾ ವ್ಯಾಪಾರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭಿನವ್ ರೆಡ್ಡಿ.