ಮುಂಬೈ/ಕೋಲ್ಕತ್ತಾ:ದೇಶದಲ್ಲಿ ಕೊರೊನಾ ಮಹಾಮಾರಿಯ ಮೂರನೇ ಅಲೆ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಪ್ರತಿದಿನ ನೂರಾರು ಹೊಸ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಇದರ ಅಬ್ಬರ ಜೋರಾಗಿದ್ದು, ಇದೀಗ ಅಲ್ಲಿನ ಶಿಕ್ಷಣ ಸಚಿವೆಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರದ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಹಾಗೂ ಪಶ್ಚಿಮ ಬಂಗಾಳದ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯನ್ ಅವರಿಗೆ ಸೋಂಕು ದೃಢವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೋಂಕು ತಗುಲಿರುವುದು ದೃಢಗೊಳ್ಳುತ್ತಿದ್ದಂತೆ ಇಬ್ಬರು ಹೋಂ ಐಸೋಲೇಷನ್ಗೊಳಗಾಗಿದ್ದು, ಕಳೆದ ಕೆಲ ದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.