ಫರೀದ್ಕೋಟ್ (ಪಂಜಾಬ್): ಪಂಜಾಬ್ನಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್ ಎಂಬುವವರನ್ನು ಗುರುವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣದ ಆರು ಜನ ಶೂಟರ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ. ಶುಕ್ರವಾರ ಆರೋಪಿಗಳ ಬಂಧನದ ವೇಳೆ ಪೊಲೀಸರೊಂದಿಗೆ ಎನ್‌ಕೌಂಟರ್ ನಡೆಸಲಾಗಿದೆ. ಆದರೂ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುರು ಗ್ರಂಥ ಸಾಹಿಬ್ಗೆ ಅಗೌರವ ತೋರಿದ ಆರೋಪವನ್ನು ಕೊಲೆಯಾದ ಪ್ರದೀಪ್ ಸಿಂಗ್ ಎದುರಿಸುತ್ತಿದ್ದ. ಸದ್ಯ ಜಾಮೀನಿನಲ್ಲಿ ಹೊರ ಬಂದಿದ್ದ ಪ್ರದೀಪ್ನನ್ನು ಗುರುವಾರ ಬೆಳಗ್ಗೆ ಕೊಲೆ ಮಾಡಲಾಗಿದೆ. ಫರೀದ್‌ಕೋಟ್‌ನಲ್ಲಿ ತಮ್ಮ ಡೈರಿಯಲ್ಲಿದ್ದಾಗ ಪ್ರದೀಪ್ ಸಿಂಗ್ ಮೇಲೆ ಆರು ಜನ ಶೂಟರ್ಗಳು ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಪ್ರದೀಪ್ ಮೇಲೆ 60 ಗುಂಡು ಹಾರಿಸಲಾಗಿದೆ ಎಂದು ಶಂಕಿಸಲಾಗಿದೆ. ಇಡೀ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಈ ಕೊಲೆಯ ಬೆನ್ನಲ್ಲೇ ಕಾರ್ಯಪ್ರವೃತರಾದ ಪೊಲೀಸರು, ಆರೋಪಗಳನ್ನು ಪತ್ತೆ ಹಚ್ಚಿದ್ದಾರೆ. ಆರು ಶೂಟರ್‌ಗಳ ಪೈಕಿ ನಾಲ್ವರು ಹರಿಯಾಣದವರು ಮತ್ತು ಇಬ್ಬರು ಪಂಜಾಬ್‌ನವರು ಎಂದು ಹೇಳಲಾಗಿದೆ. ಅಲ್ಲದೇ, ಈ ಶಂಕಿತರೆಲ್ಲರೂ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗುಂಪಿಗೆ ಸೇರಿದವರು ಎನ್ನಲಾಗಿದೆ.
ಬಂಧನಕ್ಕೆ ತೆರಳಿದಾಗ ಎನ್‌ಕೌಂಟರ್:ಪ್ರದೀಪ್ ಸಿಂಗ್ ಕೊಲೆ ಪ್ರಕರಣದ ಆರೋಪಿಗಳನ್ನು ಗುರುತಿಸಿರುವ ಬಗ್ಗೆ ಪಂಜಾಬ್ ಪೊಲೀಸ್ ಇಲಾಖೆ ಗುಪ್ತಚರ ಮತ್ತು ದೆಹಲಿ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗ ಖಚಿತಪಡಿಸಿದೆ. ಹಂತಕರ ಗುರುತು ಪತ್ತೆಯಾದ ತಕ್ಷಣವೇ ಪೊಲೀಸರು ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಿ, ಆರೋಪಿಗಳ ಮೇಲೆ ದಾಳಿ ಮಾಡಿದ್ದಾರೆ.
ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಪಟಿಯಾಲಾದ ಬಕ್ಷಿವಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೆಹಲಿ ಪೊಲೀಸ್ ತಂಡ ದಾಳಿ ನಡೆಸಿದ್ದು, ಆರು ಜನ ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದ ವೇಳೆ ಪೊಲೀಸರೊಂದಿಗೆ ಎನ್‌ಕೌಂಟರ್ ಸಹ ನಡೆದಿದೆ. ಆದರೂ, ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.