ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮತ್ತಷ್ಟು ರೋಚಕ ಘಟ್ಟಕ್ಕೆ ತಿರುಗಿದೆ. ಶಿವಸೇನೆಯ 16 ಜನ ಬಂಡಾಯ ಶಾಸಕರಿಗೆ ವಿಧಾನಸಭೆಯ ಉಪ ಸ್ಪೀಕರ್ ಅನರ್ಹತೆಯ ನೋಟಿಸ್ ಜಾರಿ ಮಾಡಿದ್ದಾರೆ.
ಶಿವಸೇನೆ ಮುಖ್ಯಸ್ಥ, ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿರುವ ಏಕನಾಥ ಶಿಂದೆ ನೇತೃತ್ವದ ಸುಮಾರು 38 ಶಾಸಕರು ಬಿಜೆಪಿ ಆಡಳಿತದ ಅಸ್ಸೋಂನ ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಈ ಬಣದಲ್ಲಿರುವ 16 ಶಾಸಕರಿಗೆ ಮಹಾರಾಷ್ಟ್ರ ಉಪ ಸ್ಪೀಕರ್ ಅನರ್ಹತೆಯ ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೇ, ಎಲ್ಲ 16 ಶಾಸಕರು ಜೂನ್ 27ರ ಸೋಮವಾರದೊಳಗೆ ನೋಟಿಸ್ಗೆ ತಮ್ಮ ಲಿಖಿತ ಉತ್ತರಗಳನ್ನು ಸಲ್ಲಿಸಬೇಕೆಂದು ಸೂಚಿಸಿದ್ದಾರೆ.
ಏಕನಾಥ ಬಣಕ್ಕೆ ಪ್ರತ್ಯೇಕ ಹೆಸರು:ಜೊತೆಗೆ ಶಿವಸೇನೆಯ ಬಣಗಳ ಕಿತ್ತಾಟ ಕೂಡ ತಾರಕಕ್ಕೇರಿದೆ. ಇದು ಪಕ್ಷವೇ ವಿಭಜನೆಯಾಗುವ ಹಂತಕ್ಕೆ ಬಂದು ತಲುಪಿದೆ. ಗುವಾಹಟಿಯಲ್ಲಿ ಬೀಡು ಬಿಟ್ಟಿರುವ ಬಂಡಾಯ ನಾಯಕ ಏಕನಾಥ ಶಿಂದೆ ನೇತೃತ್ವದ ಗುಂಪು ತಮ್ಮದೇ ಪ್ರತ್ಯೇಕ ಬಣವನ್ನು ಹುಟ್ಟು ಹಾಕಿದೆ. ಇದಕ್ಕೆ 'ಶಿವಸೇನೆ ಬಾಳಾಸಾಹೇಬ್' ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಮಾಜಿ ಸಚಿವ, ರೆಬೆಲ್ ಶಾಸಕ ದೀಪಕ್ ಕೇಸರಕರ್ ಮಾಹಿತಿ ನೀಡಿದ್ದಾರೆ.