ನವದೆಹಲಿ:ಕೊರೊನಾ ವೈರಸ್ ಪ್ರಕರಣಗಳ ವ್ಯಾಪಕ ಹೆಚ್ಚಳದಿಂದ ಎಲ್ಲೆಡೆ ಜೀವವಾಯು ವೈದ್ಯಕೀಯ ಆಮ್ಲಜನಕದ ಹಾಹಾಕಾರ ಸೃಷ್ಟಿಯಾಗಿದೆ. ಆಕ್ಸಿಜನ್ ಒದಗಿಸಲು ಸರ್ಕಾರಗಳು, ಆಸ್ಪತ್ರೆಗಳು ಪರೆದಾಟ ನಡೆಸುತ್ತಿವೆ. ಇದರ ಮಧ್ಯೆ ಜೀವಜಲದ ಅಭಾವ ಎದುರಾಗಬಹು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಯಮುನಾ ನದಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ದೆಹಲಿಯ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಕೊರತೆ ಆಗಬಹುದು. ಮುಂಬರುವ ದಿನಗಳಲ್ಲಿ ನಗರದ ಆಸ್ಪತ್ರೆಗಳ ಮೇಲೂ ಪರಿಣಾಮ ಬೀರಬಹುದು ಎಂದು ದೆಹಲಿ ಜಲ ಮಂಡಳಿ (ಡಿಜೆಬಿ) ಉಪಾಧ್ಯಕ್ಷ ರಾಘವ್ ಚಾಧಾ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಗೆ ಸಾಕಷ್ಟು ಕುಡಿಯುವ ನೀರು ಲಭ್ಯವಾಗುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಯಮುನಾಗೆ ಹೆಚ್ಚು ಕಚ್ಚಾ ನೀರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಹರಿಯಾಣವು ನದಿಗೆ ಕಡಿಮೆ ಪ್ರಮಾಣದ ನೀರು ಬಿಡುಗಡೆ ಮಾಡುತ್ತಿರುವುದರಿಂದ ವಾಜಿರಾಬಾದ್ ಕೊಳದಲ್ಲಿನ ನೀರಿನ ಮಟ್ಟವು ಸಾಮಾನ್ಯ ಮಟ್ಟವಾದ 674.5 ಅಡಿಗಳಿಂದ 667.20 ಅಡಿಗಳಿಗೆ ಇಳಿದಿದೆ ಎಂದು ಚಾಧಾ ತಿಳಿಸಿದ್ದಾರೆ.
ವಾಜಿರಾಬಾದ್ ಕೊಳದಿಂದ ನೀರನ್ನು ವಾಜಿರಾಬಾದ್, ಓಖ್ಲಾ ಮತ್ತು ಚಂದ್ರವಾಲ್ ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ.
ಯಮುನಾದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಕಾರಣ ಮೂರು ಡಬ್ಲ್ಯೂಟಿಪಿಗಳಲ್ಲಿನ ನೀರಿನ ಉತ್ಪಾದನೆ ಕಡಿಮೆಯಾಗಿದೆ. ಇದು ಹಲವು ವಸತಿ ಪ್ರದೇಶಗಳಲ್ಲಿ ನೀರಿನ ಪೂರೈಕೆಯ ಕೊರತೆಗೆ ಕಾರಣವಾಗಿದೆ. ಇದು ಮುಂಬರುವ ದಿನಗಳಲ್ಲಿ ದೆಹಲಿಯ ಆಸ್ಪತ್ರೆಗಳ ಮೇಲೂ ಪರಿಣಾಮ ಬೀರಬಹುದು. ಕೊರೊನಾ ವೈರಸ್ ವೇಳೆ ದಯವಿಟ್ಟು ದೆಹಲಿಗೆ ಸಹಾಯ ಮಾಡಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದ ಕಾರಣ ಮಧ್ಯ ದೆಹಲಿ, ಉತ್ತರ ದೆಹಲಿ, ದಕ್ಷಿಣ ದೆಹಲಿ, ಪಶ್ಚಿಮ ದೆಹಲಿಯ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗಿದೆ ಎಂದು ಡಿಜೆಬಿ ತಿಳಿಸಿದೆ.