ತಿರುವನಂತಪುರಂ:ಅರೆನಗ್ನವಾಗಿದ್ದ ಪುರುಷ ದೇಹ ಪ್ರಶ್ನೆಗೆ ಒಳಗಾಗಲ್ಲ, ಹಾಗಿದ್ದಲ್ಲಿ ಮಹಿಳೆಯ ದೇಹ ಅರೆ ನಗ್ನವಾಗಿದ್ದರೆ ಅದನ್ನು ಲೈಂಗಿಕ ಪ್ರಚೋದನೆ ಅಥವಾ ಅಶ್ಲೀಲವೆಂದು ಪರಿಗಣಿಸಲಾಗದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ತನ್ನ ಮಕ್ಕಳು ಅರೆ ನಗ್ನ ದೇಹದ ಮೇಲೆ ಚಿತ್ರ ಬಿಡಿಸುವ ವಿಡಿಯೋ ಮಾಡಿದ್ದ ಹೋರಾಟಗಾರ್ತಿ ರೆಹನಾ ಫಾತಿಮಾ ವಿರುದ್ಧ ದಾಖಲಾಗಿದ್ದ ಕೇಸ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಮಹಿಳೆಯ ಬೆತ್ತಲೆ ದೇಹವನ್ನು ಯಾವಾಗಲೂ ಲೈಂಗಿಕ ಅಥವಾ ಅಶ್ಲೀಲ ಎಂದು ಪರಿಗಣಿಸಬಾರದು. ಎಲ್ಲರಿಗೂ ದೇಹದ ಸ್ವಾಯತ್ತತೆ ಇದೆ. ಪುರುಷ ದೇಹದ ಸ್ವಾತಂತ್ರ್ಯವನ್ನು ವಿರಳವಾಗಿ ಪ್ರಶ್ನಿಸಲಾಗುತ್ತದೆ. ಆದರೆ, ಮಹಿಳೆಯರು ನಗ್ನವಾಗಿ ಕಂಡಲ್ಲಿ ಪಿತೃಪ್ರಧಾನ ಸಮಾಜದ ನಿರಂತರ ಬೆದರಿಕೆಗೆ ಒಳಗಾಗುತ್ತಾರೆ. ಮಹಿಳೆಯರೂ ಕೂಡ ತಮ್ಮ ದೇಹ ಮತ್ತು ಜೀವನದ ಆಯ್ಕೆಗಳನ್ನು ಹೊಂದಿದ್ದಾರೆ. ಆದಾಗ್ಯೂ ಅವರು ತಾರತಮ್ಯ, ಪ್ರತ್ಯೇಕತೆ ಮತ್ತು ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ ಎಂದು ಕೋರ್ಟ್ ಹೇಳಿದೆ.
ಕೇರಳದ ಮಹಿಳೆ ತನ್ನ ದೇಹದ ಮೇಲೆ ತನ್ನ ಮಕ್ಕಳಿಗೆ ಬಣ್ಣದ ಚಿತ್ತಾರ ಬಿಡಿಸಲು ಅನುಮತಿಸಿದ್ದಲ್ಲಿ ಯಾವುದೇ ಅಶ್ಲೀಲತೆ, ಲೈಂಗಿಕತೆ ಕಾಣುತ್ತಿಲ್ಲ. ತಾಯಿಯ ದೇಹದ ಮೇಲೆ ಮಕ್ಕಳು ಚಿತ್ರಿಸಿದರೆ, ಲೈಂಗಿಕ ಕ್ರಿಯೆಯ ಭಾಗ ಎಂದು ನಿರೂಪಿಸಲಾಗುವುದಿಲ್ಲ ಅಥವಾ ಲೈಂಗಿಕ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ದೇಹ ಕ್ಯಾನ್ವಾಸ್ನಂತೆ ಬಳಕೆ:ಪುರುಷ ಮತ್ತು ಮಹಿಳೆಯ ದೇಹದ ಬಗೆಗಿನ ಸಮಾಜದ ದ್ವಂದ್ವ ನಿಲುವನ್ನು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಪೀಠ ಗಮನಿಸಿತು. ತಾಯಿಯು ತನ್ನ ಮಕ್ಕಳಿಗೆ ತನ್ನ ದೇಹವನ್ನು ಚಿತ್ರಿಸಲು ಕ್ಯಾನ್ವಾಸ್ನಂತೆ ಬಳಸಲು ಅನುಮತಿಸಿದರೆ ತಪ್ಪೇನೂ ಇಲ್ಲ ಎಂದಿದೆ.