ಗುಜರಾತ್: ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿ ಶಾಸಕ ಕೇಸರಿ ಸಿನ್ಹಾ ಸೋಲಂಕಿಗೆ ಪಕ್ಷ ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರಾಕರಿಸಿದೆ. ಪಕ್ಷದ ಈ ನಿರ್ಧಾರದಿಂದ ಬೇಸತ್ತ ಅವರು ಬಿಜೆಪಿಗೆ ಗುಡ್ಬೈ ಹೇಳಿ, ಆಮ್ ಆದ್ಮಿ ಪಕ್ಷ ಸೇರಿದ್ದಾರೆ. ಗುಜರಾತ್ನ ಖೇಡ ಜಿಲ್ಲೆಯ ಮತರ್ ವಿಧಾನಸಭಾ ಕ್ಷೇತ್ರದಲ್ಲಿ ಅವರು ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿ ಗೆಲುವು ಕಂಡಿದ್ದಾರೆ.
ಕೇಸರಿಸಿನ್ಹಾ ಸೋಲಂಕಿಯನ್ನು ಎಎಪಿ ರಾಜ್ಯ ಘಟಕ ಪ್ರತಿನಿಧಿ ಗೋಪಾಲ ಇಟಲಿಯಾ ಸ್ವಾಗತಿಸಿದ್ದು, ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಮತರ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕ ಸೋಲಂಕಿ ಅವರು ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಯುತ ರಾಜಕೀಯದಿಂದ ಪ್ರೇರಿತರಾಗಿ, ಇಂದು ನಮ್ಮ ಪಕ್ಷ ಸೇರಿದ್ದಾರೆ. ಅವರಿಗೆ ನಾನು ಪಕ್ಷದಿಂದ ಆತ್ಮೀಯ ಸ್ವಾಗತ ಕೋರುತ್ತೇವೆ. ನಾವು ಒಟ್ಟಾಗಿ ಗುಜರಾತ್ನಲ್ಲಿ ನ್ಯಾಯಯುತ ಸರ್ಕಾರ ರಚನೆ ಮಾಡುತ್ತೇವೆ ಎಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ಎದುರಿಸಲಿರುವ ಗುಜರಾತ್ನಲ್ಲಿ ಗುರುವಾರ ಬಿಜೆಪಿ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ವೇಳೆ ಮತರ್ ಕ್ಷೇತ್ರದಲ್ಲಿ 2014 ಮತ್ತು 2017ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಸೋಲಂಕಿಯವರನ್ನು ಕೈ ಬಿಟ್ಟು ಕಲ್ಪೆಶ್ ಪರ್ಮರ್ ಅವರಿಗೆ ಟಿಕೆಟ್ ಘೋಷಿಸಿದೆ.