ಸಿಂಘರ್: ಮುಳುಗುತ್ತಿರುವ ಪಟ್ಟಣವಾಗಿರುವ ಜೋಶಿಮಠದಲ್ಲಿ ಮನೆಗಳ ಬಿರುಕು ಮೂಡುತ್ತಿರುವ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದೆ. ಈ ನಡುವೆ ಉತ್ತರಾಖಂಡ್ನ ಜೋಶಿಮಠದ ಸಿಂಘರ್ನಲ್ಲಿ ಜನವರಿ 2 ಮತ್ತು 3 ಮಧ್ಯರಾತ್ರಿ ಅನೇಕ ಮನೆಗಳು, ದೇವಸ್ಥಾನಗಳು ನೆಲಸಮಗೊಂಡಿವೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಘಟನೆಗಳು ವರದಿಯಾಗಿವೆ. ಮೂಲಗಳ ಪ್ರಕಾರ, ಅನೇಕ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಹತ್ತಿರದ ದೇಗುಲದಲ್ಲಿ ಕೂಡ ಈ ಬಿರುಕು ಮುಂದುವೆದಿದ್ದು, ಇವು ಮನೆಗಳು ಕುಸಿದು ಬೀಳುವ ಹಂತ ತಲುಪಿದೆ.
ಘಟನೆ ಕುರಿತು ಮಾತನಾಡಿರುವ ಸ್ಥಳೀಯರಾದ ಹರ್ಷ ಎಂಬುವರು, ಜನವರಿ 2ರಿಂದ ಈ ಘಟನೆ ಆರಂಭವಾಗಿದೆ. ಮನೆಗಳಲ್ಲಿ ಬಿರುಕು ಮೂಡಿದ್ದು, ಮಧ್ಯರಾತ್ರಿ 2.30ರ ಸುಮಾರಿಗೆ ಗಾಢ ನಿದ್ದೆಯಲ್ಲಿದ್ದಾಗ ಜೋರಾದ ಸದ್ದಾಯಿತು. ಗೋಡೆಗಳಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡು ಕಾಂಕ್ರಿಟ್ಗಳು ನೆಲಕ್ಕೆ ಉರುಳಿದವು.
ರಾತ್ರಿಯಿಡೀ ಬಯಲಲ್ಲಿ ಕಳೆದ ಜನ: ಘಟನೆಯಿಂದ ಭೀತಿಗೊಂಡ ನಾವು ಮನೆಯಿಂದ ಹೊರ ಬಂದು ಬಯಲಲ್ಲಿ ರಾತ್ರಿ ಕಳೆದೆವು. ಇದಾದ ಮರುದಿನ ನಮ್ಮನ್ನು ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಯಿತು. ಮನೆಗಳು ನೆಲಸಮವಾದ ಹಿನ್ನೆಲೆ ಅನೇಕ ಪ್ರಮುಖ ದಾಖಲಾತಿಗಳು ಕೂಡ ನಾಶವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೋಹರ್ ಭಾಗ್ನಲ್ಲಿರುವ ಕೆಲವು ಹೋಟೆಲ್ಗಳಲ್ಲಿ ಕೂಡ ದೊಡ್ಡ ಬಿರುಕು ಕಾಣಿಸಿಕೊಂಡಿದೆ ಎಂದರು.
ಘಟನೆ ಕುರಿತ ಮಾತನಾಡಿರುವ ಮತ್ತೊಬ್ಬ ಸ್ಥಳೀಯರಾದ ರಿಶಿ ದೇವಿದೆ, ನಮ್ಮ ಮನೆ ಸೇರಿದಂತೆ ಹಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮನೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಸಹಾಯ ಮಾಡುವಂತೆ ಮುನ್ಸಿಪಾಲಿಟಿಗೆ ಕೇಳಿಕೊಂಡೆವು. ಅವರು ಈ ಬಗ್ಗೆ ಕಾರ್ಯ ನಡೆಸಲು ನಿರಾಕರಿಸಿದ್ದು, ಈ ಸಂಬಂಧ ನಮಗೆ ಯಾವುದೇ ಮೇಲಾಧಿಕಾರಿಗಳಿಂದ ಆದೇಶ ಬಂದಿಲ್ಲ ಎಂದು ಸುಮ್ಮನಾಗಿದ್ದಾರೆ. ಎರಡು ಮೂರು ದಿನದಲ್ಲಿ ಅನೇಕ ಮನೆಗಳು ನೆಲಕ್ಕೆ ಉರುಳಿದೆ. ಹತ್ತಿರದ ದೇವಸ್ಥಾನ ಕೂಡ ನೆಲಸಮಗೊಂಡಿದೆ. ನಮ್ಮ ಜಾನುವಾರುಗಳು ಕೂಡ ಸಾವನ್ನಪ್ಪಿವೆ. ನಮ್ಮ ಮಕ್ಕಳು ಇದೀಗ ನಿರುದ್ಯೋಗಿಗಳಾಗಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.